LATEST NEWS
ಮಗಳ ಸಾವಿನಿಂದ ದುರಂತದಲ್ಲಿ ಅಂತ್ಯವಾದ ತಾಯಿಯ 100ನೇ ಹುಟ್ಟುಹಬ್ಬ ಆಚರಣೆ
ಮಗಳ ಸಾವಿನಿಂದ ದುರಂತದಲ್ಲಿ ಅಂತ್ಯವಾದ ತಾಯಿಯ 100ನೇ ಹುಟ್ಟುಹಬ್ಬ ಆಚರಣೆ
ಮಂಗಳೂರು ಎಪ್ರಿಲ್ 3: ತಾಯಿಯ ನೂರನೇ ಹುಟ್ಟು ಹಬ್ಬದ ಸಂಭ್ರಮಾಚರಣೆ ಸಂದರ್ಭದಲ್ಲೇ ಮಗಳು ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಗ್ಲೋರಿಯಾ ಲೋಬೋ(75) ಮೃತ ದುರ್ದೈವಿ, ಗ್ಲೊರಿಯ ಲೊಬೊ ಕೆನಡಾದಲ್ಲಿ ವಾಸಿಸುತ್ತಿದ್ದು ನಾಲ್ಕು ದಿನಗಳ ಹಿಂದೆ ಮಂಗಳೂರಿಗೆ ತನ್ನ ತಾಯಿಯ 100ನೇ ಹುಟ್ಟುಹಬ್ಬವನ್ನು ಆಚರಿಸಲು ಬಂದಿದ್ದರು ಮಂಗಳೂರಿನ ಪಾಂಡೇಶ್ವರ ನಿವಾಸಿ ಗ್ಲಾಡಿ ಡಿಸೋಜಾ ಕಳೆದ ಮಾರ್ಚ್ 30 ರಂದು ಶತಮಾನೋತ್ಸವ ಕಂಡಿದ್ದರು.
ಅವರು ತಮ್ಮ ಪುತ್ರಿ ಲಿಝಾ ಮತ್ತು ಸೋದರರಾದ ಟ್ರೆವರ್ ಡಿಸೋಜ ಮತ್ತು ಕ್ರಿಸ್ಟೋಫರ್ ಡಿಸೋಜ ಜೊತೆ ಮಂಗಳೂರು ಸಮೀಪ ಪಾಂಡೇಶ್ವರದ ವೃದ್ಧಾಶ್ರಮ ನಿಂಪ ಸದನ್ ನಲ್ಲಿ ತಾಯಿ ಗ್ಲಾಡಿಸ್ ಡಿಸೋಜ ಅವರ ಅದ್ದೂರಿ ಹುಟ್ಟುಹಬ್ಬ ಆಚರಣೆಯನ್ನಿಟ್ಟುಕೊಂಡಿದ್ದರು.
ಲವಲವಿಕೆಯಿಂದ ತಮ್ಮ ತಾಯಿಯ ಹುಟ್ಟುಹಬ್ಬದ ಆಚರಣೆಯಲ್ಲಿ ತೊಡಗಿದ್ದ ಗ್ಲೊರಿಯಾ ಲೊಬೊ ಆಚರಣೆ ಸಂದರ್ಭಕ್ಕೆಂದು ಒಂದು ಹಾಡನ್ನು ಕೂಡ ಸೃಷ್ಟಿಸಿದ್ದರು. ವೀಲ್ ಚೇರ್ ನಲ್ಲಿ ಗ್ಲಾಡಿ ಡಿಸೋಜ ಅವರನ್ನು ಕರೆತರಲಾಯಿತು. ಕೇಕ್ ಕತ್ತರಿಸಿಯಾದ ನಂತರ ಗ್ಲೋರಿಯಾ ಹಠಾತ್ತನೆ ಕುಸಿದು ಬಿದ್ದರು. ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಅಷ್ಟೊತ್ತಿಗಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.
ಇವೆಲ್ಲವೂ ಕ್ಷಣಾರ್ಧದಲ್ಲಿಯೇ ನಡೆದುಹೋಯಿತು, ಸಂಭ್ರಮದಲ್ಲಿ ತೊಡಗಿದ್ದ ಕುಟುಂಬಕ್ಕೆ ಸೂತಕದ ಛಾಯೆ ಬಂದೆರಗಿತು.ಶತಮಾನ ಪೂರೈಸಿರುವ ಗ್ಲಾಡಿ ಡಿಸೋಜ ಅವರಿಗೆ ಶ್ರವಣ ಸಮಸ್ಯೆ ಮತ್ತು ನೆನಪುಶಕ್ತಿಯ ಕೊರತೆ ಇರುವುದರಿಂದ ಅಲ್ಲಿ ಏನು ನಡೆಯಿತು ಎಂದು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಅವರ ಮಗಳು ತೀರಿಕೊಂಡಳು ಎಂದು ಅವರಿಗೆ ತಿಳಿಯಲೇ ಇಲ್ಲವಂತೆ.
ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ ಗ್ಲೋರಿಯಾ ಲೊಬೊ ಅವರಿಗೆ ಬೈಪಾಸ್ ಸರ್ಜರಿಯಾಗಿತ್ತು. ತುಂಬಾ ಖುಷಿಯಿಂದ ತಾಯಿಯ ಹುಟ್ಟುಹಬ್ಬ ಆಚರಣೆಯಲ್ಲಿ ಪಾಲ್ಗೊಂಡಿದ್ದ ಗ್ಲೊರಿಯಾಗೆ ಹವಾಮಾನ ವ್ಯತ್ಯಾಸದಿಂದ ತೊಂದರೆಯಾಗಿರಬಹುದು ಎಂದು ಕುಟುಂಬಿಕರು ಹೇಳುತ್ತಾರೆ. ಗ್ಲೊರಿಯಾ ಅಂತ್ಯಸಂಸ್ಕಾರ ಕೆನಡಾದಲ್ಲಿ ನಡೆಯಲಿದೆ ಎಂದು ಅವರ ಕುಟುಂಬಿಕರು ತಿಳಿಸಿದ್ದಾರೆ.
You must be logged in to post a comment Login