FILM
ಬೆಳ್ಳಂಬೆಳಗ್ಗೆ ಸದ್ದಿಲ್ಲದೆ ಬಿಗಿ ಭದ್ರತೆಯಲ್ಲಿ ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್..!

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹ ಸೇರಿದ್ದ ನಟ ದರ್ಶನ್ ಎಡವಟ್ಟು ಮಾಡಿಕೊಂಡು ಬಳ್ಳಾರಿ ಜೈಲಿಗೆ ಸ್ಥಳಾಂತರವಾಗಿದ್ದಾನೆ.
ಗುರುವಾರ ಬೆಳಗಿನ ಜಾವ ಬೆಂಗಳೂರಿನ ಕಾರಾಗೃಹದಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ. ಸೂಕ್ತ ಭದ್ರತೆಯ ಮೂಲಕ ನಟ ದರ್ಶನ್ ನನ್ನು ಪೊಲೀಸರರು ಕರೆದೊಯ್ದಿದ್ದು ಇನ್ನುಂದೆ ದರ್ಶನ್ ಗೆ ಬಳ್ಳಾರಿ ಜೈಲೇ ಆಸರೆಯಾಗಲಿದೆ.

ಮುಂಜಾನೆ 4.30ರ ಸುಮಾರಿಗೆ ಪರಪ್ಪನ ಅಗ್ರಹಾರ ಜೈಲಿನಿಂದ ದರ್ಶನ್‌ನನ್ನು ಪೊಲೀಸರು ಕರೆದೊಯ್ದಿದ್ದಾರೆ. ಇತ್ತೀಚೆಗೆ ದರ್ಶನ್ ಜೈಲಿನಲ್ಲಿ ಕುಖ್ಯಾತ ರೌಡಿಗಳೊಂದಿಗೆ ಚೇರ್‌ನಲ್ಲಿ ಕುಳಿತು ಕಾಫಿ ಕುಡಿಯುತ್ತಾ ಸಿಗರೇಟ್ ಸೇದುತ್ತಿರುವ ಫೋಟೊ ವೈರಲ್ ಆಗಿತ್ತು. ಇದರ ಬೆನ್ನಿಗೆ ದರ್ಶನ್ ಜೈಲಿನಿಂದಲೇ ವೀಡಿಯೊ ಕಾಲ್ ಮಾಡಿರುವುದು ಕೂಡ ಬಹಿರಂಗವಾಗಿ ಸರಕಾರ ವಿಪರೀತ ಮುಜುಗರಕ್ಕೆ ಸಿಲುಕಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದೆ.
ಕೈಯಲ್ಲಿ ಬೆಡ್ ಶೀಟ್ ಹಿಡ್ಕೊಂಡು ಬಳ್ಳಾರಿಗೆ ಜೈಲಿಗೆ ಎಂಟ್ರಿ..
ಬಳ್ಳಾರಿಗೆ ಕರೆತಂದಾಗ ನಟನನ್ನು ನೋಡಲು ಬಳ್ಳಾರಿಯ ಜನ ರಸ್ತೆಗಳಲ್ಲಿ ನೆರೆದ ಕಾರಣ ಟ್ರಾಫಿಕ್ ಜಾಮ್ ಉಂಟಾಗಿತ್ತು. ಎಸಿಪಿ ಭರತ್ ರೆಡ್ಡಿ ನೇತೃತ್ವದಲ್ಲಿ ಮೂರು ಪೊಲೀಸ್ ವಾಹನಗಳ ಭದ್ರತೆಯಲ್ಲಿ ದರ್ಶನ್ ಅವರನ್ನು ಬಳ್ಳಾರಿಗೆ ತರಲಾಯಿತು. ಜನರನ್ನು ರಸ್ತೆಗಳಿಂದ ದೂರ ಸರಿಸಲು ಬಳ್ಳಾರಿ ಪೊಲೀಸರು ಹರಸಾಹಸ ಪಡಬೇಕಾಯಿತು. ಜೈಲಿನ ಒಳಗೆ ಬರುತ್ತಿದ್ದಂತೆ ಕೈಯಲ್ಲಿದ್ದ ದಾರ, ಕುತ್ತಿಗೆಯ ಚೈನ್, ಕಡಗವನ್ನು ಪೊಲೀಸರು ಬಿಚ್ಚಿಸಿದ್ದಾರೆ. ಸಾದ ಟೀ ಶರ್ಟ್, ಜೀನ್ಸ್, ಬೆಡ್ ಶೀಟ್ ಹಿಡಿದುಕೊಂಡು ದರ್ಶನ್ ಜೈಲು ಪ್ರವೇಶಿಸಿದ್ದಾರೆ. ಒಟ್ಟಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ದರ್ಶನ್ ಗೆ ರೇಣುಕಾ ಸ್ವಾಮಿ ಕೊಲೆ ನೆಲೆಯನ್ನೇ ಕಳೆದುಕೊಂಡಂತಾಗಿದೆ.