LATEST NEWS
‘ಸನ್ ರೈಸರ್ ನಲ್ಲಿ ಆಡುತ್ತಿದ್ದಾಗ ಜನಾಂಗೀಯ ಕಿರುಕುಳ ಅನುಭವಿಸಿದ್ದೆ ‘
ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮಾಜಿ ನಾಯಕ ಡ್ಯಾರೆನ್ ಸಮಿ
ಕಿಂಗ್ಸ್ ಟನ್, ಜೂನ್ 7, ಕ್ರಿಕೆಟಿನಲ್ಲೂ ಜನಾಂಗೀಯ ನಿಂದನೆ ಇದೆ ಎಂದು ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದ್ದ ವೆಸ್ಟ್ ಇಂಡೀಸ್ ಕ್ರಿಕೆಟ್ ದೈತ್ಯ ಕ್ರಿಸ್ ಗೈಲ್ ಮಾತಿಗೆ ತಂಡದ ಮಾಜಿ ನಾಯಕ ಡ್ಯಾರೆನ್ ಸಮಿ ಕೂಡ ದನಿಗೂಡಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಸನ್ ರೈಸರ್ ತಂಡದಲ್ಲಿ ಆಡುತ್ತಿದ್ದಾಗ ನಾನೂ ಜನಾಂಗೀಯ ನಿಂದೆ ಅನುಭವಿಸಿದ್ದೆ ಎಂದು ಡ್ಯಾರೆನ್ ಸಮಿ ತನ್ನ ಇನ್ ಸ್ಟಾ ಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.
ಯಾವಾಗ ಈ ಘಟನೆ ನಡೆದಿತ್ತು ಮತ್ತು ಯಾರು ಹೀಗೆ ಬಣ್ಣದ ವಿಚಾರದಲ್ಲಿ ನಿಂದನೆ ಮಾಡಿದ್ದರು ಎನ್ನುವುದರ ಬಗ್ಗೆ ಸಮಿ ಖಚಿತವಾಗಿ ಹೇಳಿಕೊಂಡಿಲ್ಲ. ಆದರೆ, ಸನ್ ರೈಸರ್ ತಂಡದಲ್ಲಿ ಇರುವಾಗ ಕೆಲವರು ತನ್ನನ್ನು ಕಪ್ಪು ವರ್ಣೀಯ ಅನ್ನುವ ಕಾರಣಕ್ಕೆ ಕೀಟಲೆ ಮಾಡುತ್ತಿದ್ದರು. ಕಪ್ಪು ಬಣ್ಣದ ಅರ್ಥ ಬರುವ ಹಾಗೆ ತನ್ನನ್ನು ಕರೆಯುತ್ತಿದ್ದರು ಎಂದು ಹೇಳಿದ್ದಾರೆ. ಕ್ರಿಕೆಟಿನಂಥ ಆಟದಲ್ಲಿ ಇಂಥ ವರ್ಣಭೇದ ಇರುವುದನ್ನು ಐಸಿಸಿ ಗಂಭೀರವಾಗಿ ಪರಿಗಣಿಸಬೇಕು.
ನನ್ನಂಥ ಆಟಗಾರನೊಬ್ಬ ಇಂಥ ನಿಂದೆಯನ್ನು ಅನುಭವಿಸುವುದನ್ನ ನೀವು ಬಯಸುತ್ತೀರಾ..? ಇದು ಕೇವಲ ಅಮೆರಿಕದಲ್ಲಿ ಮಾತ್ರ ಇರುವುದಲ್ಲ ಅಂತ ಡ್ಯಾರೆನ್ ಸಮಿ ಐಸಿಸಿಗೆ ಪ್ರಶ್ನೆ ಮಾಡಿದ್ದಾರೆ. ಅಮೆರಿಕದಲ್ಲಿ ಕಪ್ಪು ವರ್ಣೀಯರ ಪರವಾಗಿ ಜನಾಂದೋಲನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಡ್ಯಾರೆನ್ ಸಮಿ ಈ ಹೇಳಿಕೆ ನೀಡಿದ್ದಾರೆ.