LATEST NEWS
ಬಂದೋಬಸ್ತ್ ನಲ್ಲಿದ್ದ ದಲಿತ ಪೊಲೀಸ್ ಸಿಬ್ಬಂದಿಯನ್ನು ದೇವಸ್ಥಾನದಿಂದ ಹೊರ ಹಾಕಿದ ಅರ್ಚಕ ವೃಂದ
ಬಂದೋಬಸ್ತ್ ನಲ್ಲಿದ್ದ ದಲಿತ ಪೊಲೀಸ್ ಸಿಬ್ಬಂದಿಯನ್ನು ದೇವಸ್ಥಾನದಿಂದ ಹೊರ ಹಾಕಿದ ಅರ್ಚಕ ವೃಂದ
ಮಂಗಳೂರು ಡಿಸೆಂಬರ್ 5: ದಲಿತ ಮಹಿಳೆ ಎನ್ನುವ ಕಾರಣಕ್ಕೆ ಕರ್ತವ್ಯನಿರತ ದಲಿತ ಮಹಿಳಾ ಪೊಲೀಸ್ ಪೇದೆಯನ್ನು ದೇವಸ್ಥಾನದಿಂದ ಹೊರಕ್ಕೆ ಕಳುಹಿಸಿರುವ ಘಟನೆ ಮಂಗಳೂರಿನ ಮೂಡಬಿದ್ರೆ ತಾಲೂಕಿನ ಕಡಂದಲೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದಿದೆ.
ಮುಜರಾಯಿ ಇಲಾಖೆಯ ಅಧೀನದಲ್ಲಿರುವ ಈ ದೇವಸ್ಥಾನದಲ್ಲಿ ಕಳೆದ ಸೋಮವಾರ ಷಷ್ಠಿ ಮಹೋತ್ಸವ ಹಿನ್ನಲೆ ಮೂಡಬಿದ್ರೆ ಪೊಲೀಸರು ಬಂದೋಬಸ್ತ್ ನಡೆಸಿದ್ದರು. ದೇವಸ್ಥಾನದ ಒಳಾಂಗಣದಲ್ಲಿ ಭಕ್ತರ ಜನ ಸಂದಣಿಯನ್ನು ನಿಯಂತ್ರಿಸುತ್ತಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ದಲಿತ ಸಮುದಾಯದವರು ಎಂದು ಗೊತ್ತಾಗಿದ್ದೇ ತಡ, ಅಲ್ಲಿನ ಅರ್ಚಕ ವೃಂದದವರು ತಕ್ಷಣ ಆ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ದೇವಸ್ಥಾನದಿಂದ ಹೊರಕ್ಕೆ ಕಳಿಸಿದ್ದಾರೆ.
ಅಲ್ಲದೆ ಪಾರ್ಕಿಂಗ್ ಸ್ಥಳದಲ್ಲಿ ಬಂದೋ ಬಸ್ತ್ ಮಾಡಿ, ದೇವಸ್ಥಾನದ ಒಳಗೆ ನಿಮ್ಮನ್ನು ಬಿಟ್ಟದ್ದು ಯಾರು? ಕ್ಷೇತ್ರಕ್ಕೆ ನಿಮ್ಮಿಂದ ಮೈಲಿಗೆಯಾಗಿದೆ ಎಂದು ಸಾವಿರಾರು ಭಕ್ತರ ಮುಂದೆಯೇ ಅವಮಾನಿಸಿ ಹೊರಗಡೆ ಕಳುಹಿಸಿದ್ದಾರೆ.
ಇದನ್ನು ಕೆಲವರು ವಿರೋಧಿಸಿದರೂ ಅರ್ಚಕ ವೃಂದ ಕ್ಯಾರೇ ಎನ್ನದೆ ದಲಿತ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ದೇವಸ್ಥಾನದಿಂದ ಹೊರಕ್ಕೆ ಕಳುಹಿಸಿದ್ದಾರೆ. ಮಾತ್ರವಲ್ಲದೆ ಭೋಜನ ವ್ಯವಸ್ಥೆಯಲ್ಲೂ ತಾರತಮ್ಯ ನಡೆಸಿದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಷಷ್ಠಿ ಮಹೋತ್ಸವದ ಸಂದರ್ಭ ಭದ್ರತೆಗೆ ನಿಯೋಜನೆಗೊಂಡ ತಮ್ಮ ಸಹದ್ಯೋಗಿಗೆ ಅವಮಾನ ಮಾಡಿದ ದೇವಸ್ಥಾನದ ಅರ್ಚಕ ವೃಂದದ ನಡೆಯಿಂದ ಹಾಗೂ ಭೋಜನದಲ್ಲೂ ಪಂಕ್ತಿ ಭೇದ ಮಾಡಿದ ಅರ್ಚಕರ ವರ್ತನೆಯಿಂದ ಕರ್ತವ್ಯನಿರತ ಎಲ್ಲ ಪೊಲೀಸರು ಸ್ಥಳೀಯ ಹೋಟೇಲ್‍ನಲ್ಲಿ ಮಧ್ಯಾಹ್ನದ ಊಟ ಮಾಡಿದ್ದರು.
ದೇವಸ್ಥಾನದ ಈ ರೀತಿಯ ವರ್ತನೆಗೆ ಈಗ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಘಟನೆ ಕುರಿತಂತೆ ಮುಖ್ಯಮಂತ್ರಿ ಕಚೇರಿಗೂ ದೂರು ನೀಡಲಾಗಿದೆ.