LATEST NEWS
ದಿನಕ್ಕೊಂದು ಕಥೆ – ಆ ಮೂರು ದಿನ
ಆ ಮೂರು ದಿನ
ತಿಂಗಳಲ್ಲಿ ಮೂರು ದಿನ ಅಮ್ಮ ಮನೆಯಿಂದ ಹೊರ ಇರಬೇಕು, ಅವಳಿಗೆ ಕಾಗೆ ಮುಟ್ಟಿದೆ ಅಂತ ಅಪ್ಪ ಅಂದರು. ನಾನು ಅಮ್ಮನ ಜೊತೆನೇ ಇದ್ದೆ .ನನಗೆ ಎಲ್ಲೋ ಕಾಗೆ ಅಮ್ಮನ ಹತ್ತಿರ ಸುಳಿದಾಡುವುದು ಕಂಡಿಲ್ಲ. ಅಪ್ಪ ಎಷ್ಟೊತ್ತಿಗೆ ನೋಡಿದ್ರೂ ಗೊತ್ತಿಲ್ಲ .ಅಮ್ಮ ಮನೆಯೊಳಗೆ ಬರುವಂತೆ ಇಲ್ಲವಂತೆ. ಕೊಟ್ಟಿಗೆಯಲ್ಲಿರಬೇಕಂತೆ. ಅಲ್ಲೇ ಅವರ ಚಾಪೆ ,ದಿಂಬು. ಅಲ್ಲಿಗೆ ಅನ್ನ ನೀರು ಸರಬರಾಜು .ಅವರನ್ನು ಮುಟ್ಟುವ ಹಾಗಿಲ್ಲವಂತೆ.
ಅಪ್ಪನ ಜೊರು ಧ್ವನಿಯ ಅಪ್ಪಣೆಯಾಗಿತ್ತು. ಮೂರು ದಿನದ ಮನೆಕೆಲಸ ಹಂಚಿಕೆಯಾಗಿ ,ಗುಡಿಸಿ ,ಒರೆಸಿ ಪಾತ್ರೆ ತೊಳೆಯುವುದು ನನ್ನ ಮತ್ತು ತಂಗಿಯ ಪಾಲಿಗೆ ಬಂತು. ಅಪ್ಪನಿಗೆ ಅಡುಗೆಗೆ ಸಹಾಯ ಕೂಡ ಮಾಡಬೇಕು. ಯಬ್ಬಾ, ಉಪ್ಪು ,ಹುಳಿ ,ಖಾರ, ಸಿಹಿ ಯಾವುದಕ್ಕೆ ಎಷ್ಟಿರಬೇಕು ಅಷ್ಟಿಲ್ಲದೆ ಹೆಚ್ಚು ಕಡಿಮೆಯಾಗಿತ್ತು.
ಅಮ್ಮ ಮಾತ್ರ ತುಟಿಯಂಚಲ್ಲಿ ಒಮ್ಮೆ ನಕ್ಕು ತಲೆತಗ್ಗಿಸಿ ಊಟ ಮಾಡಿದರು .ಕಾಗೆ ಯಾವಾಗ ಮುಟ್ಟಿದ್ದು ಅಂತ ಕೇಳಿದರೆ ಉತ್ತರನೇ ಇಲ್ಲ .ಬೀಡಿ ಕಟ್ಟುತ್ತಾ ಮೌನವಾದರು. ಅಮ್ಮನ ಪಕ್ಕ ಮಲಗೋಕೆ 3 ದಿನ ಅವಕಾಶವಿಲ್ಲ. ಮೂರುದಿನದ ನಂತರ ಸ್ನಾನ ಮಾಡಿ ಅಮ್ಮ ಮನೆಯ ಒಳಗೆ ಬರಬೇಕಂತೆ .ಇದು ಕೆಲವು ತಿಂಗಳು ಘಟಿಸಿ ಅಪ್ಪನಿಗೆ ಅಡುಗೆ ಉಸಾಬರಿ ಬೇಡ ಅನ್ನಿಸಿ ,ನಿಯಮ ಸಡಿಲಿಸಿದರು. ಆ ದಿನ ಸುಪ್ರಿಂ ಕೋರ್ಟಿನ ತೀರ್ಪು ಹೊರ ಬಿತ್ತು. ಕಾಗೆ ಮುಟ್ಟಿದ ದಿನ ಅಮ್ಮ ದೇವರಿಗೆ ದೀಪ ಇಡೋದು ಬೇಡ .ಉಳಿದೆಲ್ಲ ಕೆಲಸ ಮಾಡಬಹುದು. ಮನೆಯೊಳಗೆ ಇರಬಹುದು. ಅಡುಗೆ ಮಾಡಬಹುದು.
ಉಸ್ಸಪ್ಪಾ, ನೆಮ್ಮದಿ. ಆದರೆ ನನ್ನದೊಂದು ಯೋಚನೆ ತಿಂಗಳಿಗೆ ಮೂರು ದಿನ ಯಾಕೆ ಕಾಗೆ ಜಾಸ್ತಿ ಸಲ ಮುಟ್ಟಬಹುದಲ್ವಾ. ಅಮ್ಮನಿಗೆ ಒಂದಷ್ಟು ವಿಶ್ರಾಂತಿ ಆದರು ಸಿಗಬಹುದು.ಅದಕ್ಕಾಗಿ ಕಾಗೆಯ ಹತ್ರ ಹೇಳಬೇಕು ಅಂತ ತುಂಬಾ ಸಮಯದಿಂದ ಕಾಯುತ್ತಿದ್ದೇನೆ. ಎಲ್ಲಿದ್ದಿಯೋ
ಧೀರಜ್ ಬೆಳ್ಳಾರೆ