LATEST NEWS
ತೊಕ್ಕೊಟ್ಟು ಯುನಿಟಿ ಹಾಲ್ ವಿರುದ್ದ ಕ್ರಿಮಿನಲ್ ಕೇಸ್ ಟ್ರೇಡ್ ಲೈಸನ್ಸ್ ರದ್ಧತಿಗೆ ಶಿಫಾರಸು – ಟಿ.ಆರ್ ಸುರೇಶ್

ತೊಕ್ಕೊಟ್ಟು ಯುನಿಟಿ ಹಾಲ್ ವಿರುದ್ದ ಕ್ರಿಮಿನಲ್ ಕೇಸ್ ಟ್ರೇಡ್ ಲೈಸನ್ಸ್ ರದ್ಧತಿಗೆ ಶಿಫಾರಸು – ಟಿ.ಆರ್ ಸುರೇಶ್
ಮಂಗಳೂರು ಫೆಬ್ರವರಿ 2: ಮದುವೆ ಹಾಗೂ ಇನ್ನಿತರ ಖಾಸಗಿ ಸಮಾರಂಭ ನಡೆಯುವ ಹಾಲ್ ಗಳ ಪಕ್ಕದ ರಸ್ತೆ ಬದಿ ವಾಹನ ನಿಲುಗಡೆ ಮಾಡಿದರೆ ಸಂಬಂಧ ಪಟ್ಟ ಹಾಲ್ ಗಳ ಮಾಲಕರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ಕಮೀಷನರ್ ಟಿ.ಆರ್ ಸುರೇಶ್ ತಿಳಿಸಿದ್ದಾರೆ.
ಕಳೆದ ಬುಧವಾರ ತೊಕ್ಕೊಟ್ಟು ಸಮೀಪ ಕಲ್ಲಾಪುವಿನಲ್ಲಿ ಯೂನಿಟಿ ಹಾಲ್ ಮತ್ತು ಅದರ ಪಕ್ಕದ ಆವರಣದಲ್ಲಿ ಏರ್ಪಡಿಸಿದ್ದ ಮದುವೆ ಸಂದರ್ಭ ಅಧಿಕ ಸಂಖ್ಯೆಯಲ್ಲಿ ವಾಹನಗಳನ್ನು ರಸ್ತೆ ಬದಿ, ಸಿಕ್ಕ ಸಿಕ್ಕ ಕಡೆಗಳಲ್ಲಿ ಪಾರ್ಕ್ ಮಾಡಿದ್ದರಿಂದ ಗಂಟೆಗಟ್ಟಲೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಮಧ್ಯರಾತ್ರಿಯವರೆಗೂ ತೊಂದರೆ ಅನುಭವಿಸಿದ್ದರು.

ಸ್ಥಳದಲ್ಲಿದ್ದ ಪೊಲೀಸರು ವಾಹನ ಸಂಚಾರ ಸುಗಮ ಗೊಳಿಸುವುದನ್ನು ಬಿಟ್ಟು ಸಮಾರಂಭಕ್ಕೆ ಆಗಮಿಸಿದ ವಾಹನಗಳ ಪಾರ್ಕಿಂಗ್ ಗೆ ಸಹಾಯ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಹಲವಾರು ಮಂದಿ ನಾಗರಿಕರು ಪೊಲೀಸ್ ಕಮಿಷನರ್ ಅವರಿಗೆ ಕರೆ ಮಾಡಿ ತಮ್ಮ ಅಹವಾಲು ತೋಡಿಕೊಂಡರು.
ಬುಧವಾರ ಯೂನಿಟಿ ಹಾಲ್ ಸಮೀಪ ಉಂಟಾದ ರಸ್ತೆ ತಡೆಗೆ ಸಂಬಂಧಿಸಿ ಹಾಲ್‌ನ ಮಾಲಕರ ವಿರುದ್ಧ ಸಾರ್ವಜನಿಕ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಐಪಿಸಿ ಸೆಕ್ಷನ್ 283 ಅನ್ವಯ ಕ್ರಿಮಿನಲ್ ಪ್ರಕರಣ ದಾಖಲಿಸಿ, ನೋಟಿಸ್ ಜಾರಿ ಮಾಡಲಾಗಿದೆ. ಟ್ರೇಡ್ ಲೈಸನ್ಸ್ ರದ್ಧತಿಗಾಗಿ ಉಳ್ಳಾಲ ಪುರಸಭೆಗೆ ಪತ್ರ ಬರೆದು ಶಿಫಾರಸು ಮಾಡುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಕಮಿಷನರ್ ತಿಳಿಸಿದರು.
ಅಲ್ಲದೆ ಮುಂದೆ ಕಲ್ಯಾಣ ಮಂಟಪ ಮತ್ತು ಇತರ ಸಭಾಂಗಣಗಳಲ್ಲಿ ಮದುವೆ ಮತ್ತಿತರ ಖಾಸಗಿ ಸಮಾರಂಭಗಳು ನಡೆಯುವ ಸಂದರ್ಭ ರಸ್ತೆ ಮತ್ತು ರಸ್ತೆ ಬದಿ ವಾಹನ ನಿಲುಗಡೆ ಮಾಡಿ ಸಂಚಾರಕ್ಕೆ ಅಡಚಣೆ ಉಂಟು ಮಾಡುವ ವಾಹನ ಮಾಲಕರ ಮತ್ತು ಸಭಾಂಗಣಗಳ ಮಾಲಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಹಾಗೂ ಸಂಬಂಧಪಟ್ಟ ಹಾಲ್‌ಗಳ ಟ್ರೇಡ್ ಲೈಸನ್ಸ್‌ಗಳ ರದ್ಧತಿಗೆ ಸ್ಥಳೀಯ ಆಡಳಿತಕ್ಕೆ ಶಿಫಾರಸು ಮಾಡಲಾಗುವುದು ಎಂದು ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ತಿಳಿಸಿದರು.