ಆಡಂಬರದ ಮದುವೆಗೆ ಹೈರಾಣಾದ ಹೆದ್ದಾರಿ ಪ್ರಯಾಣಿಕರು, ತೊಕ್ಕೊಟ್ಟು ನಲ್ಲಿ ಸಂಚಾರ ನಿಯಂತ್ರಿಸಲು ಮತ್ತೆ ವಿಫಲರಾದ ಪೋಲೀಸರು.

ಮಂಗಳೂರು. ಜನವರಿ 30 :ಮಂಗಳೂರಿನ ಉಳ್ಳಾಲ ತೊಕ್ಕೋಟು ಸಮೀಪದ ಕಲ್ಲಾಪಿನಲ್ಲಿ ನಡೆದ ಅದ್ದೂರಿ ಮದುವೆಯಿಂದಾಗಿ ಮಂಗಳೂರು- ಕಾಸರಗೋಡು ಹೆದ್ದಾರಿ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ,

ಪ್ರತಿ ಬಾರಿ ಕಲ್ಲಾಪಿನ ಯುನಿಟಿ ಸಭಾಂಗಣದಲ್ಲಿ ನಡೆಯುವ ಮದುವೆಯ ಕರ್ಮವನ್ನು ಈ ಹೆದ್ದಾರಿಯಲ್ಲಿ ನರಕಯಾತನೆಯನ್ನು ಪ್ರಯಾಣಿಕರು ಅನುಭವಿಸುವಂತಹ ಸ್ಥಿತಿ ನಿರ್ಮಾಣಗೊಳ್ಳುತ್ತದೆ‌‌.

ಈ ಬಾರಿ ಯುನಿಟಿ ಹಾಲ್ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಕೃತಕ ಸಭಾಂಗಣವನ್ನು ನಿರ್ಮಿಸಿ ನಡೆದ ಮದುವೆಗೆ ಬಂದ ಅತಿಥಿಗಳು ತಾವು ಬಂದ ವಾಹನಗಳನ್ನು ರಸ್ತೆಯ ಇಕ್ಕೆಲಗಳಲ್ಲಿ ನಿಲ್ಲಿಸಿದ ಕಾರಣ ಸುಮಾರು ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಬ್ಲಾಕ್ ಆಗಿದೆ‌.

ಈ ಆಡಂಬರದ ಮದುವೆಯಿಂದಾಗಿ ಸಾವಿರಾರು ಪ್ರಯಾಣಿಕರು ರಸ್ತೆಯಲ್ಲೇ ಮೂರು ಗಂಟೆಗಳ ಕಾಲ ಕಳೆಯುವಂತಹ ಸ್ಥಿತಿ ನಿರ್ಮಾಣಗೊಂಡಿದೆ.

ಮಕ್ಕಳು, ಮಹಿಳೆಯರು ಸೇರಿದಂತೆ ತಮ್ಮ ಕರ್ತವ್ಯ ಮುಗಿಸಿ ಮನೆ ಕಡೆಗೆ ತೆರಳುವ ಜನಕ್ಕೆ ಭಾರೀ ತೊಂದರೆಯಾಗಿದೆ.

ಇತರರಿಗೆ ತೊಂದರೆ ನೀಡಿ ಯಾವ ಪುರುಷಾರ್ಥಕ್ಕಾಗಿ ಇಂಥಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ ಎನ್ನುವ ಪ್ರಶ್ನೆಗೆ ಜನಸಾಮಾನ್ಯನನಿಗೆ ಇಂದಿಗೂ ಉತ್ತರ ಸಿಕ್ಕಿಲ್ಲ.ತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಜನಸಾಮಾನ್ಯನಿಗೆ ತೊಂದರೆ ನೀಡುತ್ತಿದೆ ಎಂದು ಎರಡು ದಿನಗಳ ಹಿಂದೆಯಷ್ಟೇ ಪಾದಾಯಾತ್ರೆ ಮಾಡಿದ ಕೆಲವು‌ ಮಂದಿಯೂ ಈ ಮದುವೆ ಕಾರ್ಯಕ್ರಮಕ್ಕೆ ತಮ್ಮ ಕಾರುಗಳನ್ನು ರಸ್ತೆಯಲ್ಲೇ ನಿಲ್ಲಿಸಿ ಬಿರಿಯಾನಿ ಸವಿಯಲು ತೆರಳಿದ್ದಾರೆ ಎನ್ನುವ ಆರೋಪವೂ ಇದೆ.

ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆಗಿಂತ ಇಂಥ ಮದುವೆಗಳೇ ಇತ್ತೀಚಿನ ದಿನಗಳಲ್ಲಿ ಜನತೆಗೆ ಕಂಟಕವಾಗಿ ಪರಿಣಮಿಸುತ್ತಿವೆ. ಟ್ರಾಫಿಕ್ ಕಂಟ್ರೋಲ್‌ ಮಾಡಬೇಕಾದ ಪೋಲೀಸರು ಇಂಥ ಮದುವೆಗಳು ನಡೆಯುವ ಸಭಾಂಗಣದ ಮುಂಭಾಗದಲ್ಲಿ ಸೆಕ್ಯುರಿಟಿಗಳಾಗಿ ಮದುವೆಗೆ ಬರುವ ವಾಹನಗಳನ್ನು ನಿಯಂತ್ರಿಸುವ ಪ್ರಕ್ರಿಯೆಯಲ್ಲಿ ತೊಡಗುತ್ತಿರುವುದು ಜಿಲ್ಲೆಯ ಪೋಲೀಸರ ದಾಸ್ಯಕ್ಕೆ ಹಿಡಿದ ಕೈಗನ್ನಡಿಯಂತಿದೆ.

ಹೆದ್ದಾರಿ ಪಕ್ಕದಲ್ಲಿ ಇಂಥಹ ಆಡಂಬರದ ಮದುವೆಗಳಿಂದ ಜನಸಾಮಾನ್ಯನಿಗೆ ತೊಂದರೆಯಾಗುತ್ತದೆ ಎನ್ನುವುದು ತಿಳಿದಿದ್ದರೂ, ಪೋಲೀಸರು ಇದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳದಿರುವುದು ವಿಪರ್ಯಾಸವಾಗಿದೆ.