ಪ್ರಧಾನಿ ಮೋದಿಗಾಗಿ ಉಡುಪಿಯಲ್ಲಿ ಬ್ರಹ್ಮರಥೋತ್ಸವ

ಉಡುಪಿ ಫೆಬ್ರವರಿ 2: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಮತ್ತೆ ಪ್ರಧಾನಿಯಾಗಿ ಆಯ್ಕೆ ಆಗಲಿ ಎಂದು ಉಡುಪಿಯಲ್ಲಿ ಯುವಕರು ಕೃಷ್ಣನಿಗೆ ಬ್ರಹ್ಮರಥೋತ್ಸವ ಸೇವೆ ಸಲ್ಲಿಸಿದ್ದಾರೆ.ಇದು ಮೋದಿಯ ಗೆಲುವಿಗಾಗಿ ನಡೆದ ರಥೋತ್ಸವ.

ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ. ಗೆಲುವಿಗಾಗಿ ರಾಜಕೀಯ ಪಕ್ಷಗಳು ತೆರೆಮರೆಯಲ್ಲಿ ಸಕಲ ಸಿದ್ಧತೆಗಳನ್ನು ನಡೆಸುತ್ತಿವೆ. ಇದರ ಜೊತೆ ಜೊತೆಯಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ತಮ್ಮ ನೆಚ್ಚಿನ ನಾಯಕನ ಗೆಲುವಿಗಾಗಿ ಪೂಜೆ ಪುನಸ್ಕಾರಗಳು ನಡೆಯುತ್ತಿವೆ.

ಉಡುಪಿಯ ಸುಮಾರು 10 ಮಂದಿ ಪ್ರಧಾನಿ ಮೋದಿ ಅಭಿಮಾನಿಗಳು ಉಡುಪಿಯಲ್ಲಿ ಬ್ರಹ್ಮರಥೋತ್ಸವದ ಹರಕೆ ಹೊತ್ತಿದ್ದಾರೆ. ಪ್ರಧಾನಿ ಮೋದಿ ಮುಂದಿನ ಅವಧಿಗೂ ಪ್ರಧಾನಿಯಾಗಲಿ ಎಂದು ಅವರು ಈ ಹರಕೆ ಹೊತ್ತಿದ್ದಾರೆ. ಅದರಂತೆ ಅಷ್ಟಮಠಗಳ ರಥಬೀದಿಯಲ್ಲಿ ಬ್ರಹ್ಮರಥೋತ್ಸವ ಸೇವೆ ನೀಡಿದ್ದಾರೆ.

ಸುಮಾರು 10 ಯುವಕರು ಬ್ರಹ್ಮರಥೋತ್ಸವ ಸೇವೆಯನ್ನು ಕೃಷ್ಣಮಠದಲ್ಲಿ ಬುಕ್ ಮಾಡಿಸಿದ್ದರು. ಕಾಕತಾಳೀಯ ಎಂಬಂತೆ ಮಧ್ಯಂತರ ಬಜೆಟ್ ದಿನವೇ ಹರಕೆ ತೀರಿಸುವ ಇವರಿಗೆ ಅವಕಾಶ ಸಿಕ್ಕಿದೆ. ಬ್ರಹ್ಮರಥೋತ್ಸವದಲ್ಲಿ ಕೃಷ್ಣಮಠದ ಪರ್ಯಾಯ ಪಲಿಮಾರು ಸ್ವಾಮೀಜಿ, ಅದಮಾರು ಸ್ವಾಮೀಜಿ ಕೂಡಾ ಪಾಲ್ಗೊಂಡರು. ರಥಬೀದಿಯಲ್ಲಿ ದೇಸಿ ಪಟಾಕಿ ಸೇವೆ ಕೂಡಾ ನೆರವೇರಿತು. ಕೃಷ್ಣ ಮುಖ್ಯಪ್ರಾಣ ದೇವರಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿ ಅಂತ ಪ್ರಾರ್ಥಿಸಲಾಯಿತು.

ಮಧ್ಯಮ ವರ್ಗದ ಜನರಿಗೆ ಮತ್ತು ಬಡವರಿಗೆ ಉತ್ತಮ ಯೋಜನೆಗಳನ್ನು ರೂಪಿಸಿದ ಮೋದಿ ಮತ್ತೆ ಪ್ರಧಾನಿಯಾಗಬೇಕು. ಮುಂದಿನ ಪೀಳಿಗೆಯ ಭವಿಷ್ಯ ಉತ್ತಮವಾಗಿರಬೇಕು ಎಂಬುದು ನಮ್ಮ ಉದ್ದೇಶ ಎಂದು ಸೇವಾ ಕರ್ತರು ಹೇಳಿದ್ದಾರೆ.

ಈ ಬಾರಿಯ ಚುನಾವಣೆ ಬಹಳಷ್ಟು ಜಿದ್ದಾಜಿದ್ದಿನಿಂದ ಇರೋದು ಅಂತೂ ಗ್ಯಾರಂಟಿ. ಮೋದಿಯ ವಿರುದ್ಧ ಉಳಿದೆಲ್ಲಾ ಪಕ್ಷಗಳು ಒಟ್ಟಾಗಿ ರಣ ತಂತ್ರ ರೂಪಿಸುತ್ತಿದೆ. ಆದರೆ ದೇಶದ ಯುವ ಜನತೆ ಮೋದಿ ಆಡಳಿತವನ್ನು ಬಹುವಾಗಿ ಬೆಂಬಲಿಸುತ್ತಿವೆ. ಈ ಕಾರಣದಿಂದಲೇ ಯುವ ಬ್ರಿಗೇಡ್ ನಂತಹ ಸಂಘಟನೆಗಳು ನಿರಂತರ ಕಾರ್ಯ ನಿರ್ವಹಿಸುತ್ತಿವೆ. ಆದರೆ ಚುನಾವಣೆ ಘೋಷಣೆ ಮುನ್ನವೇ ಮೋದಿ ಗೆಲುವಿಗಾಗಿ ನಡೆದ ರಥೋತ್ಸವ ಸೇವೆ ಇನ್ನಷ್ಟು ಪೂಜೆ ಪುನಸ್ಕಾರಗಳ ಆರಂಭಕ್ಕೆ ನಾಂದಿಯಾಗಬಹುದು.

Facebook Comments

comments