FILM
ಕ್ರಿಕೆಟಿಗ ನಟ ಸಲೀಲ್ ಅಂಕೋಲಾ ಅವರ ತಾಯಿ ನಿಗೂಢ ಸಾವು, ಕತ್ತು ಸೀಳಿದ ಶವ ಪತ್ತೆ..!
ಪುಣೆ: ಭಾರತದ ಮಾಜಿ ಕ್ರಿಕೆಟಿಗ ಸಲೀಲ್, ನಟ ಸಲೀಲ್ ಅಂಕೋಲಾ ಅವರ ತಾಯಿ ಮಾಲಾ ಅಂಕೋಲಾ(77) ಪುಣೆಯಲ್ಲಿರುವ ಫ್ಲ್ಯಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಲೀಲ್ ಅಂಕೋಲಾ ಕುಟುಂಬದ ಮೂಲ ಉತ್ತರ ಕನ್ನಡದ ಅಂಕೋಲಾ. ಮುಂಬಯಿಯಲ್ಲಿ ನೆಲೆಯಾಗಿದ್ದ ಈ ಕುಟುಂಬ ಬಳಿಕ ಪುಣೆಗೆ ಶಿಫ್ಟ್ ಆಗಿತ್ತು. ಪುಣೆಯ ಡೆಕ್ಕನ್ ಜಿಮ್ಖಾನಾ ಪ್ರದೇಶದಲ್ಲಿರುವ ಪ್ರಭಾತ್ ರೋಡ್ ಕಾಂಪ್ಲೆಕ್ಸ್‌ನ ಫ್ಲ್ಯಾಟ್‌ನಲ್ಲಿ ಮಾಲಾ ಒಂಟಿಯಾಗಿ ವಾಸವಾಗಿದ್ದರು. ಮನೆಗೆಲಸದಾಕೆ ಬಂದಾಗ ಮಾಲಾ ಸಾವಿಗೀಡಾಗಿರುವ ವಿಚಾರ ಬೆಳಕಿಗೆ ಬಂದಿದೆ. ತಕ್ಷಣ ಅವರು ಮಾಲಾ ಅವರ ಸಂಬಂಧಿಕರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಮಾಲಾ ಅವರ ಕುತ್ತಿಗೆಯನ್ನು ಹರಿತವಾದ ಆಯುಧದಿಂದ ಸೀಳಲಾಗಿದೆ. ತಕ್ಷಣ ಕುಟುಂಬದವರು ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ ಎನ್ನಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ ಮಾಲಾ ಅಂಕೋಲಾ ವಾಸವಾಗಿದ್ದ ಫ್ಲ್ಯಾಟ್ ಅವರ ಮಗಳ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದೆ. ಆಕೆ ಕೂಡ ಸಮೀಪದಲ್ಲೇ ಇದ್ದು, ಆಗಾಗ ಮನೆಗೆ ಬಂದು ಹೋಗುತ್ತಿದ್ದರು. ನಿನ್ನೆ ಬೆಳಗ್ಗೆ 11 ಗಂಟೆ ಸುಮಾರಿಗೆ ಮನೆಯ ಕೆಲಸದಾಕೆ ಬಂದು ಬಾಗಿಲು ಬಡಿದಿದ್ದಾರೆ. ಆಗ ಮಾಲಾ ಮನೆಯ ಬಾಗಿಲು ತೆರೆಯಲಿಲ್ಲ. ಕೆಲಸದಾಕೆ ಸಮೀಪದಲ್ಲೇ ವಾಸವಿರುವ ಆಕೆಯ ಮಗಳನ್ನು ಸಂಪರ್ಕಿಸಿದ್ದಾರೆ. ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಮಾಲಾ ಅವರ ಮಗಳು ಮನೆಯ ಕೀಲಿಯೊಂದಿಗೆ ಒಬ್ಬ ವ್ಯಕ್ತಿಯನ್ನು ಕಳುಹಿಸಿದರು ಎಂದು ಹೇಳಿದರು. ಆ ವ್ಯಕ್ತಿ ಬಂದು ಬಾಗಿಲು ತೆರೆದಾಗ ಮಾಲಾ ಹಾಸಿಗೆಯ ಮೇಲೆ ಗಾಯಗೊಂಡ ಸ್ಥಿತಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡಿದ್ದಾರೆ. ಡೆಕ್ಕನ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾಹಿತಿ ಪ್ರಕಾರ ಮಾಲಾ ಅಂಕೋಲಾಗೆ ಮಾನಸಿಕ ಸಮಸ್ಯೆಯಿತ್ತು. ಕತ್ತನ್ನು ಅವರೇ ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಕೊಲೆ ಮಾಡಲಾಗಿದೆಯೇ ಎನ್ನುವುದು ದೃಢಪಟ್ಟಿಲ್ಲ. ಮನೆಗೆ ಹೊರಗಿನವರ್ಯಾರೂ ಬಲವಂತವಾಗಿ ಪ್ರವೇಶಿಸಿದ ಕುರುಹು ಇಲ್ಲ ಎನ್ನಲಾಗಿದೆ.
ಸಲೀಲ್ ಅಂಕೋಲಾ 1989ರ ನವೆಂಬರ್ 15 ರಂದು ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಏಕೈಕ ಟೆಸ್ಟ್ ಪಂದ್ಯ ಆಡಿದ್ದರು. ಮಾಜಿ ಬಲಗೈ ವೇಗಿ ಸಲೀಂ ಮಲಿಕ್ ಅವರನ್ನು ಮೊದಲ ಎಸೆತದಲ್ಲಿ ಮತ್ತು ಸಲೀಮ್ ಯೂಸುಫ್ ಅವರನ್ನು ಎರಡನೇ ಎಸೆತದಲ್ಲಿ ಔಟ್ ಮಾಡಿ ಗಮನಸೆಳೆದಿದ್ದರು. ಅವರು ಕೇವಲ 20 ಏಕದಿನ ಪಂದ್ಯಗಳಲ್ಲಿ ಆಡಿದ್ದರು. ಕೊನೆಯ ಪಂದ್ಯವನ್ನು 1997 ರಲ್ಲಿ ಆಡಿದ್ದರು. 1996ರ ಏಕದಿನ ವಿಶ್ವಕಪ್ ತಂಡದಲ್ಲಿದ್ದರು. ಕ್ರಿಕೆಟ್‌ನ ದೂರವಾದ ಬಳಿಕ ಸಲೀಲ್ ಅಂಕೋಲಾ ಕೆಲವು ಹಿಂದಿ ಸಿನೆಮಾಗಳಲ್ಲಿ ಕೂಡ ನಟಿಸಿದ್ದರು.