LATEST NEWS
ಕಿಲೋಮೀಟರ್ ಗಟ್ಟಲೆ ಬಾಯಿ ತೆರೆದಿರುವ ಪಶ್ಚಿಮ ಘಟ್ಟ ಮತ್ತೆ ಭೂ ಕುಸಿತ ಆತಂಕ

ಕಿಲೋಮೀಟರ್ ಗಟ್ಟಲೆ ಬಾಯಿ ತೆರೆದಿರುವ ಪಶ್ಚಿಮ ಘಟ್ಟ ಮತ್ತೆ ಭೂ ಕುಸಿತ ಆತಂಕ
ಮಂಗಳೂರು ಆಗಸ್ಟ್ 26: ಕೊಡಗಿನ ಭೂ ಕುಸಿತದ ನಂತರ ಪಶ್ಚಿಮ ಘಟ್ಟದಲ್ಲಿ ನಡೆದಿರುವ ಮತ್ತಷ್ಟು ಭೂಕುಸಿತದ ವರದಿಗಳು ಬರ ತೊಡಗಿದೆ. ಪಶ್ಚಿಮ ಘಟ್ಟದ ಬೆಟ್ಟಗಳಲ್ಲಿ ಬಿರುಕು ಮೂಡಿದ ಆಘಾತಕಾರಿ ಘಟನೆಗಳು ಒಂದೊಂದಾಗಿ ಬೆಳಕಿಗೆ ಬರುತ್ತಿದ್ದು, ಪಶ್ಚಿಮ ಘಟ್ಟದ ತಪ್ಪಲಲ್ಲಿ ಇರುವ ಸ್ಥಳೀಯರಿಗೆ ಮತ್ತೆ ಆತಂಕ ಶುರುವಾಗಿದೆ.
ಬೆಟ್ಟ ಪ್ರದೇಶದಲ್ಲಿ ಆಹಾರ ಇಲ್ಲದೆ ಕಂಗಾಲಾಗಿದ್ದ ಸಾಕು ಪ್ರಾಣಿಗಳನ್ನು ಸುರಕ್ಷಿತ ವಾಗಿ ಮರಳಿ ತರಲು ರಿಸರ್ವ್ ಪೊಲೀಸ್ ಇನ್ಸ್‌ಪೆಕ್ಟರ್ ಗಣೇಶ್ ಮತ್ತು ಕೆಲ ಸ್ವಯಂ ಸೇವಕರ ತಂಡ ಗಿರಿ ಶಿಖರಗಳ ಮೇಲೆ ಹೋಗಿತ್ತು. ಗಾಳಿ ಬೀಡು ಗಿರಿ ಶಿಖರದ ಮೇಲೆ ತಂಡ ಹೋಗುತ್ತಿದ್ದಂತೆಯೇ ಅಪಾಯಕಾರಿಯಾಗಿ ಭೂಮಿ ಬಾಯ್ದೆರೆದಿರುವುದು ಗೋಚರಿಸಿದೆ.

ಗಾಳಿಬೀಡು ಹಾಗು ಪಕ್ಕದ ವಣಚ್ಚಲ್ ಬೆಟ್ಟದಲ್ಲಿ ಭಾರೀ ಬಿರುಕು ಕಂಡಿದೆ . ಅದಲ್ಲದೇ ಎಕರೆಗಟ್ಟಲೆ ಭೂಮಿ ಕುಸಿದಿರುವ ಭೀಕರ ದೃಶ್ಯ ಕಂಡು ಬಂದಿದೆ.
ಅತೀ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲಾದ ಪಶ್ಚಿಮ ಘಟ್ಟದಲ್ಲಿ ಮತ್ತೆ ಭಾರೀ ಭೂಕುಸಿತವಾಗುವ ಸಾಧ್ಯತೆ ಗಳು ಕಂಡು ಬಂದಿದ್ದು ಮತ್ತೇ ಮಳೆ ಬಂದರೆ ಭಾರೀ ಪ್ರಮಾಣದಲ್ಲಿ ಭೂ ಕುಸಿತವಾಗುವ ಸಾಧ್ಯತೆಗಳ ಬಗ್ಗೆ ರಕ್ಷಣಾ ತಂಡ ಆತಂಕ ವ್ಯಕ್ತಪಡಿಸಿದೆ.