LATEST NEWS
ಕೊರೊನಾದ ನಡುವೆ ಜಿಲ್ಲೆಯಲ್ಲಿ ಗೋಕಳ್ಳರ ಅಟ್ಟಹಾಸ….
ಮಂಗಳೂರು,ಜುಲೈ 17: ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳ ನಡುವೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಗೋಕಳ್ಳರ ಅಟ್ಟಹಾಸವೂ ಹೆಚ್ಚಾಗುತ್ತಿದೆ. ಜಿಲ್ಲೆಯ ಹಲವೆಡೆ ರಸ್ತೆ ಬದಿಯಲ್ಲಿರುವ ಗೋವುಗಳನ್ನು ಕಳ್ಳರು ಲಕ್ಸುರಿ ಕಾರುಗಳನ್ನು ಬಳಸಿಕೊಂಡು ಕದಿಯಲಾರಂಭಿಸಿದ್ದಾರೆ. ಇಂಥಹುದೇ ಒಂದು ಪ್ರಕರಣ ಇದೀಗ ಮಂಗಳೂರು ಹೊರವಲಯದ ಮುಲ್ಕಿ ಸಮೀಪದ ಕಿನ್ನಿಗೋಳಿ ಎಂಬಲ್ಲಿ ಬೆಳಕಿಗೆ ಬಂದಿದೆ.
ಸ್ವಿಫ್ಟ್ ಕಾರ್ ನಲ್ಲಿ ಬಂದ ನಾಲ್ವರು ಗೋ ಕಳ್ಳರು ಕಿನ್ನಿಗೋಳಿಯ ಮೂರು ಕಾವೇರಿ ಮಹಾಮ್ಮಾಯಿ ದೇವಸ್ಥಾನದ ಬಳಿಯಿದ್ದ ಗೋವುಗಳ ಹಿಂಡಿನಿಂದ ಒಂದು ಗೋವನ್ನು ಎಗರಿಸಿಕೊಂಡು ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮಾರಾದಲ್ಲಿ ಸೆರೆಯಾಗಿದೆ. ಜುಲೈ 9 ರ ರಾತ್ರಿ 10.24 ರ ಸುಮಾರಿಗೆ ಈ ಕೃತ್ಯವನ್ನು ಗೋಕಳ್ಳರು ನಡೆಸಿದ್ದು, ಗೋಕಳ್ಳರ ಈ ಕೃತ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಗೋಕಳ್ಳರ ಹಾವಳಿ ಹೆಚ್ಚಾಗಲಾರಂಭಿಸಿದ್ದು, ಮನೆಯ ಹಟ್ಟಿಯಿಂದಲೂ ರಾಜಾರೋಷವಾಗಿ ಗೋವುಗಳ ಕಳ್ಳತನ ನಡೆಸುತ್ತಿರುವ ಪ್ರಕರಣಗಳೂ ಬೆಳಕಿಗೆ ಬರುತ್ತಿದೆ. ತಡೆಯಲು ಬರುವವರಿಗೆ ತಲವಾರು ಸೇರಿದಂತೆ ಮಾರಕಾಯುಧಗಳಿಂದ ಬೆದರಿಸಿರುವ ಘಟನೆಗಳೂ ನಡೆದಿದ್ದು, ಪೋಲೀಸ್ ಇಲಾಖೆ ಇತ್ತ ಗಮನಹರಿಸಬೇಕಿದೆ.