Connect with us

MANGALORE

ಹುಣಸೂರಿಗೆ ವರ್ಗ ಆದರೂ ಸೋಮೇಶ್ವರ ಪುರಸಭೆ ಬಿಡಲು ಒಲ್ಲದ ಮುಖ್ಯಾಧಿಕಾರಿ !

ಮಂಗಳೂರು, ಜುಲೈ 16 : ಸೋಮೇಶ್ವರ ಪುರಸಭೆಯ ಮುಖ್ಯಾಧಿಕಾರಿಯಾಗಿರುವ ವಾಣಿ ಆಳ್ವ ಅವರನ್ನು ಮೈಸೂರು ವಿಭಾಗದ ಹುಣಸೂರು ನಗರಸಭೆ ಆಯುಕ್ತರಾಗಿ ವರ್ಗಾಯಿಸಿ ತಿಂಗಳು ಕಳೆದರೂ ವಾಣಿ ಆಳ್ವ ಜಾಗ ಬಿಟ್ಟು ಕದಲದೆ ಇಲ್ಲೇ ತಳವೂರಿದ್ದು ಪುರಸಭೆ ಸದಸ್ಯರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಮೂಲತಃ ಸಮುದಾಯ ಅಧಿಕಾರಿಯಾಗಿದ್ದ ವಾಣಿ ಆಳ್ವ, ಉಳ್ಳಾಲದ ಶಾಸಕರು ಈ ಹಿಂದೆ ನಗರಾಭಿವೃದ್ಧಿ ಸಚಿವರಾದ ಸಂದರ್ಭದಲ್ಲಿ ಅವರ ಕೃಪೆಯಿಂದ ಉಳ್ಳಾಲ ನಗರಸಭೆ ಆಯುಕ್ತರಾಗಿ ನೇಮಕಗೊಂಡಿದ್ದರು. ಇದೇ ಬೆಂಬಲದಿಂದ ಈಗ ಬೇರೆಡೆಗೆ ವರ್ಗಾವಣೆ ಆದರೂ ಅದನ್ನು ಪಾಲನೆ ಮಾಡಲು ವಾಣಿ ಆಳ್ವ ತಯಾರಿಲ್ಲದೆ, ಪುರಸಭೆ ಸ್ಥಾನದಲ್ಲಿ ಮುಂದುವರಿಯಲು ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿದೆ.

ಕೆ.ಎ.ಎಸ್ ಅಧಿಕಾರಿಯಲ್ಲದಿದ್ದರೂ ವಾಣಿ ವಿ ಆಳ್ವ ಅವರು ಉಳ್ಳಾಲ ನಗರಸಭೆಯ ಪೌರಾಯುಕ್ತೆಯಾಗಿ ಎರಡೂವರೆ ವರ್ಷ ಅಧಿಕಾರ ನಡೆಸಿದ್ದರು. ನಂತರ ಸೋಮೇಶ್ವರ ಪಂಚಾಯತ್ ಪುರಸಭೆಯಾಗಿ ಮೇಲ್ದರ್ಜೆಗೇರಿದಾಗ, ಶಾಸಕರ ಮೂಲಕ ಲಾಬಿ ನಡೆಸಿ ಸೋಮೇಶ್ವರ ಪುರಸಭೆಯ ಮುಖ್ಯಾಧಿಕಾರಿಯಾಗಿ ವರ್ಗಾವಣೆ ಮಾಡಿಕೊಂಡಿದ್ದರು. ಇದೀಗ ಸೋಮೇಶ್ವರದಿಂದ ಮೈಸೂರಿನ ಹುಣಸೂರು ನಗರಸಭೆಗೆ ವರ್ಗಾವಣೆಗೊಂಡಿದ್ದರೂ, ವಾಣಿ ಆಳ್ವ ಮಾತ್ರ ಸೋಮೇಶ್ವರ ಪುರಸಭೆ ಬಿಟ್ಟು ಹೋಗಲು ತಯಾರಿಲ್ಲ‌. ವರ್ಗಾವಣೆಗೊಂಡರೂ ಸೋಮೇಶ್ವರ ಪುರಸಭೆಯ ಮುಂದಿನ ಕಾಮಗಾರಿಗಳ ಕ್ರಿಯಾಯೋಜನೆಯನ್ನು ತರಾತುರಿಯಲ್ಲಿ ತಯಾರಿಸಿ ಕಡತ ವಿಲೇವಾರಿಯನ್ನೂ ಮಾಡುತ್ತಿದ್ದಾರೆ ಎಂದು ಅಲ್ಲಿನ ಸಿಬಂದಿ ಮಾಹಿತಿ ನೀಡಿದ್ದಾರೆ. ಇದರ ಬೆನ್ನಲೇ ವಾಣಿ ಅವರನ್ನು ಮುಲ್ಕಿ ಸಮುದಾಯ ಸಂಘಟಕರಾಗಿ ಸ್ಥಾನ ಏರಲು ಸರಕಾರದಿಂದ ಆದೇಶ ಮಾಡಲಾಗಿತ್ತು. ಆದರೆ ಪೌರಾಯುಕ್ತೆಯಾದ ಅಧಿಕಾರಿ ಮತ್ತೆ ತನ್ನ ಮೂಲಸ್ಥಾನಕ್ಕೆ ತೆರಳಲು ಒಪ್ಪದೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ.

ಸರಕಾರ ಈ ಹಿಂದೆ ಹುಣಸೂರಿಗೆ ವರ್ಗಾವಣೆ ಮಾಡಿದ ಸಂದರ್ಭದಲ್ಲಿ ವರ್ಗಾವಣೆ ಪತ್ರದಲ್ಲಿ ಷರತ್ತುಗಳನ್ನೂ ನಮೂದಿಸಿತ್ತು. ಈ ಹುದ್ದೆ ಏನಿದ್ದರೂ ತಾತ್ಕಾಲಿಕ. ಯಾವುದೇ ಸಂದರ್ಭದಲ್ಲಿ ಕೆಎಎಂಎಸ್ ಸೇವೆ ಪೂರೈಸಿದ ಅಧಿಕಾರಿ ಹುದ್ದೆಗೆ ಬಂದಲ್ಲಿ ಆಯುಕ್ತ ಹುದ್ದೆ ಬಿಟ್ಟು ಮೂಲ ಸ್ಥಾನಕ್ಕೆ ಹಿಂದಿರುಗಬೇಕು ಎಂದು ಷರತ್ತನ್ನೂ ವಿಧಿಸಿತ್ತು. ಇದೇ ಕಾರಣಕ್ಕೋ ಏನೋ, ವಾಣಿ ಆಳ್ವ ಸೋಮೇಶ್ವರ ಪುರಸಭೆಯಲ್ಲೇ ಮುಂದುವರಿಯಲು ಆಸಕ್ತರಾಗಿದ್ದಾರೆ. ಇದಕ್ಕಾಗಿ ವರ್ಗಾವಣೆ ಆದೇಶವನ್ನು ಪಾಲಿಸುವಲ್ಲಿ ಹಿಂದೇಟು ಹಾಕುತ್ತಿದ್ದು ಇದರಲ್ಲಿ ಸ್ಥಳೀಯ ಕಾಂಗ್ರೆಸ್ ಶಾಸಕ ಮತ್ತು ಬಿಜೆಪಿ ಪಕ್ಷದ ಕೆಲ ಪುಢಾರಿಗಳು ಕೈಯಾಡಿಸುತ್ತಿರುವುದರ ಬಗ್ಗೆ ಸೋಮೇಶ್ವರ ಪುರಸಭಾ ಸದಸ್ಯರು ಆರೋಪಿಸುತ್ತಿದ್ದಾರೆ.
ಈ ಬಗ್ಗೆ ಪರಿಶೀಲನೆ ನಡೆಸಿ ವಾಣಿ ಅವರನ್ನು ಸರಕಾರದ ಆದೇಶದಂತೆ ವರ್ಗಾವಣೆ ನಡೆಸಲು ಜಿಲ್ಲಾಧಿಕಾರಿಗೆ ಲಿಖಿತ ದೂರು ನೀಡಿದ್ದಾರೆ.

ಲೋಕಾಯುಕ್ತದಲ್ಲಿ ದೂರಿನ ಸರಮಾಲೆ

ವಾಣಿ ಆಳ್ವ ಈ ಹಿಂದೆ ಉಳ್ಳಾಲ ನಗರಸಭಾ ಪೌರಾಯುಕ್ತೆ ಆಗಿದ್ದ ಸಂದರ್ಭದಲ್ಲಿ ನಗರಸಭೆಯಲ್ಲಿ ನಡೆದಿದ್ದ ಲೋಕಾಯುಕ್ತ ಅದಾಲತ್ ನಲ್ಲಿ ಹಲವು ನಾಗರಿಕರು ಅಧಿಕಾರಿಯ ‌ಅವ್ಯವಹಾರದ ಬಗ್ಗೆ ದೂರುಗಳನ್ನು ನೀಡಿದ್ದರು. ಆದರೆ ಈ ದೂರುಗಳ ಬಗ್ಗೆ ತನಿಖೆ ಮಾತ್ರ ನಡೆದಿಲ್ಲ. ಇಂಥ ಅಧಿಕಾರಿ ಬಗ್ಗೆ ಉಳ್ಳಾಲ ಮತ್ತು ಸೋಮೇಶ್ವರ ಭಾಗದಲ್ಲಿ ಜನರಿಗೂ ಅಸಮಾಧಾನ ಇದೆ.

Facebook Comments

comments