LATEST NEWS
ಕೊರೊನಾ ಹೆಸರಲ್ಲಿ ಮಂಗಳೂರು ಖಾಸಗಿ ಆಸ್ಪತ್ರೆಗಳ ಹಣ ಸುಲಿಗೆ ; ಟ್ವಿಟರ್ ನಲ್ಲಿ #CovidBillKills ಅಭಿಯಾನ
ಮಂಗಳೂರು ಜುಲೈ 10: ಮಂಗಳೂರಿನಲ್ಲಿ ಕೊರೊನಾ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಲಕ್ಷಾಂತರ ರೂಪಾಯಿ ಹಣ ಕೇಳುತ್ತಿರುವುದರ ವಿರುದ್ದ ಇಂದು ಟ್ವಿಟರ್ ನಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ #CovidBillKills ಎಂಬ ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡ್ ಆಗುತ್ತಿದೆ.
ಈಗಾಗಲೇ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳು ಕೊರೊನಾವನ್ನು ಬಂಡವಾಳ ಮಾಡಿಕೊಂಡು ಸುಲಿಗೆಗೆ ಇಳಿದರುವ ಪ್ರಕರಣಗಳು ಪತ್ತೆಯಾಗುತ್ತಿದೆ. ಸರ್ಕಾರ ದರಪಟ್ಟಿಯನ್ನು ನಿಗದಿಪಡಿಸಿದ್ದರೂ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ವಿಪರೀತ ಹಣವನ್ನು ತೆಗೆದುಕೊಳ್ಳಲಾಗುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ ಇಂದು #CovidBillKills ಎಂಬ ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ಜನರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಹುತೇಕ ಟ್ವಿಟಿಗರು ಮಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಸುಲಿಗೆಯನ್ನು ಟ್ವಿಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಗಳು ಕೋವಿಡ್ ಬಿಕ್ಕಟ್ಟನ್ನು ಅವಕಾಶವನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿವೆ. ಸರ್ಕಾರ ಕುರುಡಾಗಿ ವರ್ತಿಸುತ್ತಿದೆ. ಇದು ನಾಚಿಕೆ ತರುವಂತಹ ವಿಚಾರ ಎಂದು ವಿದುಷಿ ಎಂಬುವವರು ಟ್ವೀಟ್ ಮಾಡಿದ್ದಾರೆ.
ಮಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಹಗರಣಗಳು ಕಂಡುಬಂದಿವೆ. ಇದನ್ನು ನಿರ್ಲಕ್ಷಿಸಿದರೆ ಬಡ ರೋಗಿಗಳು ಮಾನಸಿಕ ಒತ್ತಡಕ್ಕೆ ಒಳಗಾಗಬಹುದು. ಈ ರೀತಿಯ ಆರ್ಥಿಕ ಶೋಷಣೆ ರೋಗಕ್ಕಿಂತ ಕೆಟ್ಟದಾಗಿದೆ ಎಂದು ಸಮೀರ್ ಎಂಬುವವರು ಟ್ವೀಟ್ ಮಾಡುವ ಮೂಲಕ ಆತಂಕ ವ್ಯಕ್ತಪಡಿಸಿದ್ದಾರೆ.