LATEST NEWS
ಈ ಬಾರಿ ಭಾರತದ ಮುಸ್ಲಿಮರಿಗೆ ಹಜ್ ಯಾತ್ರೆ ಕಷ್ಟ ಕಷ್ಟ !

ಅನುಮತಿ ನೀಡಲು ಮೀನಾಮೇಷ ಎಣಿಸುತ್ತಿರುವ ಸೌದಿ ಅರೇಬಿಯಾ
ನವದೆಹಲಿ, ಜೂನ್ 6 : ಈ ಬಾರಿ ಭಾರತೀಯ ಮುಸ್ಲಿಮರಿಗೆ ಹಜ್ ಪ್ರವಾಸಕ್ಕೆ ಅನುಮತಿ ಸಿಗುವುದು ಕಷ್ಟವಾಗಲಿದೆ. ಹೌದು… ಸೌದಿ ಅರೇಬಿಯಾದಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಇಂಥದ್ದೊಂದು ಶಂಕೆ ಕೇಳಿಬರುತ್ತಿದೆ.
2020ರ ಸಾಲಿನ ಹಜ್ ಯಾತ್ರೆ ಸಮಯ ಸಮೀಪಿಸುತ್ತಿದ್ದರೂ ಸೌದಿ ಅರೇಬಿಯಾದಿಂದ ಈ ಬಗ್ಗೆ ಇನ್ನೂ ಸ್ಪಂದನೆ ಸಿಕ್ಕಿಲ್ಲ. ಯಾತ್ರೆ ವಿಚಾರದಲ್ಲಿ ಅಲ್ಲಿನ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಭಾರತದ ಹಜ್ ಕಮಿಟಿ ಹೇಳಿಕೊಂಡಿದೆ.
ಅವಿರತ ಶ್ರಮದ ಬಳಿಕವೂ ಸೌದಿ ಅಧಿಕಾರಿಗಳು ಸ್ಪಂದನೆ ನೀಡದಿರುವ ಹಿನ್ನೆಲೆಯಲ್ಲಿ ಯಾತ್ರೆಗೆ ಅರ್ಜಿ ಸಲ್ಲಿಸಿದವರು ಈ ಬಾರಿಯ ಹಜ್ ಯಾತ್ರೆ ರದ್ದುಪಡಿಸಿದಲ್ಲಿ ಅಂಥವರ ಟಿಕೆಟ್ ಇನ್ನಿತರ ಬಾಬ್ತನ್ನು ಪೂರ್ತಿಯಾಗಿ ಹಿಂತಿರುಗಿಸಲಾಗುವುದು ಎಂದು ಭಾರತೀಯ ಹಜ್ ಕಮಿಟಿ ಸಿಇಓ ಮಕ್ಸೂದ್ ಅಹ್ಮದ್ ಖಾನ್ ಹೇಳಿದ್ದಾರೆ.

ಪ್ರತಿವರ್ಷ ಭಾರತದಿಂದ ಎರಡು ಲಕ್ಷದಷ್ಟು ಮುಸ್ಲಿಮರು ಹಜ್ ಯಾತ್ರೆ ಕೈಗೊಳ್ಳುತ್ತಾರೆ. ನಾವು ಅದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಆದರೆ ಇನ್ನಿರುವುದು ಬಹಳ ಕಡಿಮೆ ಸಮಯ. ಸೌದಿ ಅಧಿಕಾರಿಗಳ ಸ್ಪಂದನೆಗಾಗಿ ನಾವು ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ. ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚುತ್ತಿರುವ ಕಾರಣ ಸೌದಿ ಸರಕಾರ, ಈ ಬಾರಿ ವಾರ್ಷಿಕ ಹಜ್ ಯಾತ್ರೆಗೆ ಅವಕಾಶ ನೀಡುವುದೇ ಇಲ್ಲವೇ ಅನ್ನುವುದೂ ಖಾತ್ರಿಯಾಗಿಲ್ಲ. ಹೀಗಾಗಿ ಸೌದಿ ಅರೇಬಿಯಾ ಈ ಬಗ್ಗೆ ಖಚಿತಪಡಿಸುವ ವರೆಗೆ, ಮುಸ್ಲಿಮರು ಯಾತ್ರೆ ಬುಕ್ಕಿಂಗ್ ಮಾಡುವುದನ್ನು ಸ್ವಲ್ಪಮಟ್ಟಿಗೆ ಮುಂದೂಡುವುದು ಒಳ್ಳೆಯದು ಎಂದು ಹಜ್ ಕಮಿಟಿ ಹೇಳಿದೆ.
ಸೌದಿಯಲ್ಲಿ ಈವರೆಗೆ 95 ಸಾವಿರ ಮಂದಿಗೆ ಸೋಂಕು ಆಗಿದ್ದು 600 ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾ ವ್ಯಾಪಕ ಆಗುತ್ತಿರುವ ಹಿನ್ನೆಲೆ ಕೆಲವು ದೇಶಗಳು ಹಜ್ ಯಾತ್ರೆಗೆ ತಮ್ಮ ಜನರನ್ನು ಕಳಿಸದಿರಲು ನಿರ್ಧರಿಸಿದೆ. ಮುಸ್ಲಿಂ ಜನಸಂಖ್ಯೆ ಅತಿಹೆಚ್ಚು ಇರುವ ಇಂಡೋನೇಷ್ಯಾ ಇಂಥ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ. ಪ್ರತಿವರ್ಷ ಹಜ್ ಯಾತ್ರೆ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ನಡೆಯುತ್ತದೆ.