LATEST NEWS
ಭಾರತದಲ್ಲಿರುವ ಕೊರೊನಾದ ರೂಪಾಂತರಿ ತಳಿ B.1.617.2 ಹೆಚ್ಚು ಅಪಾಯಕಾರಿ – ವಿಶ್ವ ಆರೋಗ್ಯ ಸಂಸ್ಥೆ

ಜಿನೆವಾ ಜೂನ್ 02: ಇಡೀ ವಿಶ್ವವನ್ನೇ ನಡುಗಿಸಿದ ಕೊರೊನಾ ಮಹಾಮಾರಿಯ ಪ್ರಭಾವ ಕಡಿಮೆಯಾಗುತ್ತಾ ಬಂದಿದ್ದರೂ , ಸದ್ಯ ಭಾರತದಲ್ಲಿ ಮೊದಲು ಪತ್ತೆಯಾದ ಕೋವಿಡ್ 19 ‘ಡೆಲ್ಟಾ’ ತಳಿಯೊಂದೇ ಅಪಾಯಕಾರಿಯಾದ ಕೊರೊನಾದ ರೂಪಾಂತರಿ ವೈರಸ್ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಸದ್ಯ ಭಾರತದಲ್ಲಿ ಮರಣಮೃದಂಗ ಭಾರಿಸುತ್ತಿರುವ ಕೊರೊನಾದ ರೂಪಾಂತರಿ ತಳಿಯಾದ B.1.617.2 ವೈರಸ್ ಪ್ರಭೇದವು , ಜನರಿಗೆ ಹೆಚ್ಚು ಮಾರಕವಾಗಿದ್ದು, ದೇಶದಲ್ಲಿ ಲಕ್ಷಾಂತರ ಜನರ ಸಾವಿಗೆ ಕಾರಣವಾಗಿದೆ.

ಈ ಮೊದಲು ಕೊರೊನಾ ವೈರಸ್ ಅನೇಕ ರೂಪಾಂತರಗಳನ್ನು ಕಂಡರೂ, ಭಾರತ, ಬ್ರಿಟನ್ ಹಾಗೂ ಬ್ರೆಜಿಲ್‌ನಲ್ಲಿ ಮೊದಲು ಪತ್ತೆಯಾದ ರೂಪಾಂತರಗಳನ್ನು ಮೂರು ವಿಭಿನ್ನ ತಳಿಗಳಾಗಿ ವಿಭಜಿಸಲಾಗಿತ್ತು. ಅವುಗಳ ಶಕ್ತಿ ಹಾಗೂ ಪರಿಣಾಮ ಕೂಡ ವಿಭಿನ್ನವಾಗಿತ್ತು.
ಈ ಮೂರೂ ತಳಿಗಳನ್ನು ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆಯು ಕಳೆದ ವರ್ಷ ‘ಕಳವಳಕಾರಿ ತಳಿ’ (ವಿಒಸಿ) ಎಂದು ಘೋಷಿಸಿತ್ತು. ಆದರೆ, ಮಂಗಳವಾರ ಅದು ತನ್ನ ಹೇಳಿಕೆಯನ್ನು ಪರಿಷ್ಕರಿಸಿದ್ದು, ಬ್ರಿಟನ್ ಹಾಗೂ ಬ್ರೆಜಿಲ್‌ನಲ್ಲಿ ಕಂಡುಬಂದ ವೈರಸ್‌ಗಳನ್ನು ಈ ಪಟ್ಟಿಯಿಂದ ತೆಗೆದುಹಾಕಿದೆ. ಭಾರತದಲ್ಲಿ ಮೊದಲು ಪತ್ತೆಯಾದ ವೈರಸ್ ಮಾತ್ರವೇ ಆತಂಕಕಾರಿಯಾಗಿ ಉಳಿದಿದೆ ಎಂದು ಅದು ತಿಳಿಸಿದೆ.
ಭಾರತದಲ್ಲಿ ಕಂಡುಬಂದ ರೂಪಾಂತರಕ್ಕೆ ‘ಡೆಲ್ಟಾ’ ಎಂಬ ಹೆಸರಿಡಲಾಗಿದೆ. ಬ್ರೆಜಿಲ್‌ನಲ್ಲಿ ಪತ್ತೆಯಾದ ರೂಪಾಂತರಕ್ಕೆ ‘ಗಾಮಾ’ ಎಂದು ಹೆಸರಿಸಲಾಗಿದೆ. ಬ್ರಿಟನ್‌ನಲ್ಲಿ ಪತ್ತೆಯಾದ ವೈರಸ್ ‘ಆಲ್ಫಾ’ ಹಾಗೂ ದಕ್ಷಿಣ ಆಫ್ರಿಕಾದ ತಳಿಗೆ ‘ಬೀಟಾ’ ಎಂದು ಹೆಸರಿಸಲಾಗಿದೆ.
B.1.617.2 ತಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಆರೋಗ್ಯದ ಅಪಾಯಗಳು ಬಹಳಷ್ಟು ಹೆಚ್ಚಿದೆ. ಉಳಿದ ರೂಪಾಂತರಗಳ ಪ್ರಸರಣ ಸಾಮರ್ಥ್ಯ ಗಣನೀಯ ಇಳಿಕೆಯಾಗಿರುವುದು ಗಮನಕ್ಕೆ ಬಂದಿದೆ ಎಂದು ಡಬ್ಲ್ಯೂಎಚ್‌ಒ ತನ್ನ ಸಾಪ್ತಾಹಿಕ ವರದಿಯಲ್ಲಿ ತಿಳಿಸಿದೆ.