LATEST NEWS
ಮಂಗಳೂರಿನಲ್ಲಿ ಹೆಸರಾಂತ ವೈದ್ಯರಿಗೇ ಕೊರೊನಾ..!!
ಮಂಗಳೂರು, ಜೂನ್ 30: ಮಂಗಳೂರಿನಲ್ಲಿ ಕೊರೊನಾ ಹಾಹಾಕಾರ ಶುರುವಾಗಿದೆ. ಸೋಂಕು ಸಮುದಾಯಕ್ಕೆ ಹರಡಿದೆಯೋ ಅನ್ನುವಂತೆ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಹೆಚ್ಚುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ಮಂಗಳೂರಿನ ಹತ್ತು ಮಂದಿ ಹೆಸರಾಂತ ವೈದ್ಯರಿಗೆ ಈಗ ಕೊರೊನಾ ಪಾಸಿಟಿವ್ ಆಗಿದ್ದು ಸೋಂಕಿನ ಬಗ್ಗೆ ಜನಸಾಮಾನ್ಯರಲ್ಲಿ ಆತಂಕ ಉಂಟುಮಾಡಿದೆ.
ಮಂಗಳೂರಿನ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಕೊರೊನಾ ವಿಭಾಗದ ಮುಖ್ಯಸ್ಥರೊಬ್ಬರಿಗೆ ಕೊರೊನಾ ಪಾಸಿಟಿವ್ ಆಗಿದೆ. ಅಲ್ಲದೆ, ವೆನ್ಲಾಕ್ ಆಸ್ಪತ್ರೆಯ ಹಲವು ವೈದ್ಯರು ಕ್ವಾರಂಟೈನ್ ಆಗಿದ್ದಾರೆ ಎನ್ನಲಾಗುತ್ತಿದೆ. ಇದಲ್ಲದೆ, ಮಂಗಳೂರಿನ ಹೆಸರಾಂತ ಎ.ಜೆ ಆಸ್ಪತ್ರೆ, ಕೆಎಂಸಿ, ಹೈಲ್ಯಾಂಡ್ ಆಸ್ಪತ್ರೆಗಳಲ್ಲಿ ಪ್ರಮುಖ ವೈದ್ಯರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಎ.ಜೆ. ಆಸ್ಪತ್ರೆಯ ವೈದ್ಯರೊಬ್ಬರ ಇಡೀ ಕುಟುಂಬಕ್ಕೆ ಕೊರೊನಾ ಸೋಂಕು ಹರಡಿದೆ ಎನ್ನುವ ಮಾಹಿತಿ ಲಭಿಸಿದೆ.
ಮೂಲಗಳ ಪ್ರಕಾರ, ಮಂಗಳೂರಿನಲ್ಲಿ 58 ವೈದ್ಯರು ಕ್ವಾರಂಟೈನ್ ಆಗಿದ್ದಾರೆ. ಅಲ್ಲದೆ, ಜಿಲ್ಲಾ ಹೆರಿಗೆ ಆಸ್ಪತ್ರೆ ಲೇಡಿಗೋಷನನ್ನು ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ತಾತ್ಕಾಲಿಕ ಬಂದ್ ಮಾಡಲಾಗಿದೆ. ಜುಲೈ ಏಳರ ನಂತರ ಆಸ್ಪತ್ರೆ ತೆರೆಯಲಾಗುವುದು. ಅಲ್ಲಿವರೆಗೆ ಓಪಿಡಿ ವ್ಯವಸ್ಥೆ ಇರುವುದಿಲ್ಲ. ಅದರ ಬದಲು ಖಾಸಗಿ ಆಸ್ಪತ್ರೆಗೆ ಶಿಫಾರಸು ಪತ್ರ ನೀಡಲಾಗುವುದು ಎಂದು ಲೇಡಿಗೋಷನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ.
ಕೊರೊನಾ ವಾರಿಯರ್ ಗಳೇ ಹೀಗಾದರೆ ಮುಂದಿನ ಗತಿಯೇನು ಎಂಬ ಪ್ರಶ್ನೆ ಸಾರ್ವಜನಿಕರದ್ದು..