LATEST NEWS
ಮಧ್ಯಮ ವರ್ಗದ ಜನರ ಕಣ್ಣಿಗೆ ಕಾಣದ ಕೋಳ ತೊಡಿಸಿದ ಕೊರೊನಾ…….!!

ಮಂಗಳೂರು : ಒಂದು ವರ್ಷದ ಆದಾಯ ಮೂರು ತಿಂಗಳಲ್ಲಿ ಖತಂ. ಲಾಕ್ ಡೌನ್ ಸೀಲ್ ಡೌನ್ ಪೊಸಿಟಿವ್ ನೆಗೆಟಿವ್ ಶಬ್ದಗಳು ಬಿಟ್ರೆ ಜನಸಾಮಾನ್ಯನ ಬದುಕಿನಲ್ಲಿ ಆಶಾದಾಯಕ ಶಬ್ದಗಳು ಮುಗಿದೇ ಹೋದವು.ಕೊರೊನಾ ಮಧ್ಯಮವರ್ಗದ ಜನರಿಗೆ ಕಣ್ಣಿಗೆ ಕಾಣದ ಕೋಳ ತೊಡಿಸಿತು.
ಮಾರ್ಚ್ ಆರಂಭವಾಗುತ್ತಿದ್ದಂತೆ ಎಲ್ಲೆಡೆ ಸೀಸನ್ ಆರಂಭದ ಕಹಳೆ ಊದಲಾಗಿತ್ತು. ಇನ್ನೇನು ವರ್ಷದ ಫೇವರಿಟ್ ಸೀಸನ್ ಎಂದು ಕರೆಯುವ ಮಾರ್ಚ್ ಎಪ್ರಿಲ್ ಮೇ….. ಕನಸಲ್ಲೂ ಊಹಿಸದ ರೀತಿ ಬಲಿಯಾಯಿತು. ಕಳೆದು ಹೋಯಿತು ವರ್ಷದ ಬಿಸಿನೆಸ್.ಎಲ್ಲದಕ್ಕೂ ರೂಲ್ಸ್ ಎಲ್ಲದಕ್ಕೂ ಕಟ್ಟುಪಾಡು ಎಲ್ಲೆಲ್ಲಿಯೂ ಬಂದೋಬಸ್ತ್ ಅಂಗಡಿ ಇಲ್ಲ ಹೋಟೇಲಿಲ್ಲ. ಮಾಲಿಲ್ಲ ಥಿಯೇಟರ್ ಇಲ್ಲ. ಇಷ್ಟಕ್ಕೆಲ್ಲಾ ಕಾರಣವಾದ ವೈರಸ್ ಕಣ್ಣಿಗೆ ಕಾಣಲೇ ಇಲ್ಲ.

ಕರಾವಳಿಯಲ್ಲಿ ಈ ಸೀಸನ್ ಅಂದ್ರೆ ಜಾತ್ರೆ ನೇಮ ಕೋಲ ಬ್ರಹ್ಮಕಲಶ ಮದುವೆ ಮುಂಜಿ ಯಕ್ಷಗಾನ ನಾಟಕ ಸಮಾವೇಶ ಗೌಜಿ ಗದ್ದಲ….. ಎಲ್ಲವೂ ಮಾಯ. ಇಲ್ಲಿ ಒಂದೊಂದು ಕಾರ್ಯಕ್ರಮ ಹತ್ತು ವಿಭಾಗದವರ ಹೊಟ್ಟೆ ಹೊರೆಯುತ್ತಿತ್ತು. ಒಂದು ಕಾರ್ಯಕ್ರಮ ಅಂದ್ರೆ ಪುರೋಹಿತರು ಅಡುಗೆಯವರು ಬಡಿಸುವವರು ಶಾಮಿಯಾನ ನೀರು ಕಾರ್ಪೆಟ್ ಹೂವು ವಿಡಿಯೋ ಫೋಟೊ ಬ್ಯೂಟಿ ಪಾರ್ಲರ್ ಮೈಕ್ ಸೌಂಡ್ ಸ್ಟೇಜ್ ಡೆಕೊರೇಶನ್ ಫ್ಲೆಕ್ಸ್ ಬ್ಯಾನರ್ ಪ್ರಿಂಟ್ ಅಯ್ಯೋ ಹೀಗೆ ಒಂದಕ್ಕೊಂದು ಕೊಂಡಿ ಒಟ್ಟು ಜನಜೀವನ ಹಂಚಿಕೊಂಡು ಸಾಗುತ್ತಿತ್ತು. ಕಲಾವಿದರು ಸಂಗೀತಗಾರರು ವಿದ್ವಾಂಸರು ಕೂಲಿ ಕಾರಗಮಿಕರು ಹೀಗೆ ಒಂದೇ ಒಂದು ವರ್ಗವನ್ನು ಬಿಡದೆ ಕೊರೊನಾ ಕಣ್ಣಿಗೆ ಕಾಣದ ಸೂಜಿಯಿಂದ ನಿತ್ಯ ಚುಚ್ಚಿದೆ.
ಲಾಕ್ ಡೌನ್ ಒಳ್ಳೇದನ್ನೂ ಮಾಡಿದೆ. ಮನೆ ತಿಂಡಿಗಳು ಹಪ್ಪಳಸೆಂಡಿಗೆ ಮತ್ತೆ ಒಣಗಿವೆ. ಮನೆ ಮಂದಿಯ ಭಾಂಧವ್ಯ ಮತ್ತೆ ಬೆಸೆದಿದೆ. ಏನೂ ಇಲ್ಲದೆ ಊಟ ಮಾಡಲು ಸಾಧ್ಯ ಅನ್ನೋದನ್ನು ಕಲಿಸಿದೆ. ಜಂಜಾಟದ ಜೀವನದಲ್ಲಿ ದೂರವಾದ ಮನಸ್ಸುಗಳು ಹತ್ತಿರವಾಗಿವೆ. ನಮ್ಮನ್ನು ನಿಯಂತ್ರಿಸುವ ಶಕ್ತಿಯೊಂದು ಇದೆ ಅನ್ನುವುದು ಎಲ್ಲರಿಗೂ ಅರ್ಥವಾಗಿದೆ. ಸದ್ಯ ಎಲ್ಲವೂ ತೆರೆಯುತ್ತಿದೆ ಆದರೆ ಜನರಿಲ್ಲ. ಇದ್ದವರಲ್ಲಿ ಹಣವಿಲ್ಲ. ಶಿಕ್ಷಣ ವ್ಯಾಪಾರ ವಹಿವಾಟು ಎಲ್ಲೆಡೆ ಕೊರೊನಾ ಕರಿನೆರಳಿನ ಭಯ ಹೋಗಿಲ್ಲ.
ಈ ಕೊರೊನಾ ದೇವರನ್ನೂ ಬಿಟ್ಟಿಲ್ಲ. ಬಂದ ಕಷ್ಟ ಪರಿಹಾರ ಮಾಡು ಅಂತ ದೇವರನ್ನು ಬೇಡೋಣ ಅಂದ್ರೆ ದೇವಸ್ಥಾನದ ಬಾಗಿಲೂ ಅದೆಷ್ಟೋ ದಿನ ಮುಚ್ಚಿತ್ತು. ಆದರೂ ಮತ್ತಷ್ಟು ಉತ್ಸಾಹದಿಂದ ಜನ ಹೊಸ ಬದುಕ ಕಾಣಲು ಹೊರಟಿದ್ದಾರೆ. ಆದರೆ ಪ್ರಕೃತಿಯ ನಿರ್ಧಾರ ತಿಳಿಯುವವರಾರು……ಏನೇ ಆಗಲಿ ಬದುಕುವ ಛಲ ಮಾಸದಿರಲಿ ಕೊರೊನಾ ಮತ್ತೆ ಬಾರದಿರಲಿ ಬದುಕು ಎಂದಿನ ಹಳಿಗೆ ಮರಳಲಿ ಎಂಬುದು ನಮ್ಮ ಆಶಯ ನೋಡ್ತಾ ಇರಿ …