LATEST NEWS
ಕೋವಿಡ್ ಪಾಸಿಟಿವ್, ಸಾವು ; ಜನರ ಸಂಶಯಕ್ಕೆ ಜಿಲ್ಲಾಡಳಿತ ಸ್ಪಂದಿಸ ಬೇಕಿದೆ ‘
ಮಂಗಳೂರು, ಜು.10: ಕೋವಿಡ್ -19 ಟೆಸ್ಟ್ ಆರೋಗ್ಯವಂತ ಇರುವವರನ್ನು ಫ್ಲೂ , ಶೀತ, ತಲೆನೋವು ಹೊಂದಿದವರನ್ನೂ ‘ಕೋವಿಡ್ -19 ಪಾಸಿಟಿವ್’ ಎಂದು ತೋರಿಸುತ್ತದೆ. ಕೋವಿಡ್ ಪೀಡಿತರೆಂದು ತೀವ್ರ ನಿಗಾ ಘಟಕ ಸೇರುವ ವೃದ್ಧ ರೋಗಿಗಳು, ತಾವು ಈತನಕ ಬಳಸುತ್ತಿದ್ದ ಔಷಧಿ ಬಳಕೆಗೆ ಅವಕಾಶ ನಿರಾಕರಿಸಲ್ಪಟ್ಟ ಕಾರಣಕ್ಕೆ ಸಾವನ್ನಪ್ಪುತ್ತಿದ್ದಾರೆ ಎಂಬ ದೂರು ಜಿಲ್ಲೆಯಲ್ಲಿ ಸಾರ್ವತ್ರಿಕವಾಗಿ ಕೇಳಿ ಬರುತ್ತಿವೆ. ಕೋವಿಡ್ ಪೀಡಿತರೆಂದು ಗುರುತಿಸಲಾಗುವ ಜನರ ಸಾವಿನ ಸಂಖ್ಯೆಯೂ ಹೆಚ್ಚುತ್ತಿರುವುದರಿಂದ ಜನರು ಆತಂಕಿತರಾಗಿದ್ದಾರೆ. ಆದ್ದರಿಂದ ಸರ್ಕಾರ, ಉಸ್ತುವಾರಿ ಸಚಿವರು ಮತ್ತು ದ.ಕ ಜಿಲ್ಲಾಧಿಕಾರಿಗಳು ಕೂಡಲೇ ಈ ಕುರಿತು ಗಮನ ಹರಿಸಿ, ಸೂಕ್ತ ಕ್ರಮ ಜರುಗಿಸ ಬೇಕು ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ್ ಒತ್ತಾಯಿಸಿದ್ದಾರೆ.
ಹೆಚ್ಚಿನವರು ಇತರೇ ರೋಗಗಳಿಗೆ, ನಿಗದಿತವಾಗಿ ಸೇವಿಸುತ್ತಿರುವ ಔಷಧಿಗಳನ್ನು ಕೊರೊನಾ ಸಂದರ್ಭದಲ್ಲಿ ಪಡೆಯದಂತೆ ತಡೆಯಲಾಗುತ್ತಿದೆ. ಇದರಿಂದಾಗಿ ರೋಗ ಉಲ್ಬಣಿಸಿ ವೃದ್ಧ ರೋಗಿಗಳು ಹಾಗೂ ಅಂಗವೈಫಲ್ಯ ಇದ್ದವರು ಸಾವೀಡಾಗುತ್ತಿದ್ದಾರೆ. ಕೋವಿಡ್ ಸಾವಿಗೆ ಬಲಿಯಾದ ವ್ಯಕ್ತಿಯ ಕುಟುಂಬ ಸದಸ್ಯರು ಹಾಗೂ ಎರಡು ದಿನಗಳಲ್ಲಿ ಎರಡೆರಡು ರೀತಿಯ ಕೋವಿಡ್ ರಿಪೋರ್ಟ್ ಪಡೆದ ವ್ಯಕ್ತಿಗಳು ಮಾಧ್ಯಮಗಳಲ್ಲಿ ಕೋವಿಡ್ -19 ಪರೀಕ್ಷೆ ಯ ಕುರಿತು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.
ಮಳೆಗಾಲದಲ್ಲಿ ಫ್ಲೂ, ನೆಗಡಿ, ಶೀತ ಕಂಡುಬರುವುದು ಕರಾವಳಿಯಲ್ಲಿ ಸಹಜ. ಕೆಲವರಿಗೆ ಡೆಂಗ್ಯೂ, ಮಲೇರಿಯಾ, ನ್ಯುಮೋನಿಯಾ ಮುಂತಾದ ತೀವ್ರವಾದ ಕಾಯಿಲೆಗಳೂ ಬಾಧಿಸುವುದಿದೆ. ಈಗ, ಮಳೆ ನಿರಂತರವಾಗಿ ಸುರಿಯುತ್ತಿದ್ದು ಕೊರೋನ ತಪಾಸಣೆ ಸಂದರ್ಭದಲ್ಲಿ ಇಂತಹವರನ್ನು ಪಾಸಿಟಿವ್ ಆಗಿ ಗುರುತಿಸಲಾಗುತ್ತಿದೆ ಎಂದು ಜನರು ಹೇಳುತ್ತಿದ್ದಾರೆ. ಕೋವಿಡ್ ಪಾಸಿಟಿವ್ ಆಗಿ ಕ್ವಾರಂಟೈನ್ ನಲ್ಲಿ ಒಂದು ವಾರಕ್ಕೂ ಹೆಚ್ಚು ಇದ್ದವರಲ್ಲಿ ಕೋವಿಡ್ ಲಕ್ಷಣವೇ ಗೋಚರಿಸದೆ, ಅವರು ಕ್ವಾರಂಟೈನ್ ನಿಂದ ಬಿಡುಗಡೆ ಗೊಳ್ಳುತ್ತಿರುವುದು ಕಾಣಲು ಸಿಗುತ್ತಿವೆ. ಲಿವರ್, ಕಿಡ್ನಿ, ಹೃದಯ ಮತ್ತಿತರ ರೋಗಗಳಿಂದ ಬಳಲುತ್ತಿರುವವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋದರೆ, ಮೊದಲು ಕೋವಿಡ್ ಟೆಸ್ಟ್ ಮಾಡಿದಾಗ ಕೋವಿಡ್ ಪಾಸಿಟಿವ್ ಅವರಲ್ಲಿ ಕಂಡು ಬರುತ್ತಿರುವುದರ ಕಡೆಗೂ ರೋಗಿಗಳ ಮನೆಯವರು ಸಂಶಯ ವ್ಯಕ್ತಪಡಿಸುತ್ತಿರುವುದರಿಂದ, ಜಿಲ್ಲಾಡಳಿತ, ಜನರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಸ್ಪಂದಿಸುವ ಅಗತ್ಯವಿದೆ ಎಂದು ಹೇಳಿರುವ ಫಾರೂಕ್ ಉಳ್ಳಾಲ್, ಕೋವಿಡ್ ಪೀಡಿತರ ಹೆಸರು ಗೌಪ್ಯವಾಗಿಡುತ್ತೇವೆ ಎಂದು ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಹೇಳುತ್ತಿದ್ದರೂ ವ್ಯಕ್ತಿಯ ಹೆಸರನ್ನಷ್ಟೇ ರಹಸ್ಯ ವಾಗಿರಿಸಿ ಉಳಿದ ಕುರುಹುಗಳನ್ನು ಪರೋಕ್ಷವಾಗಿ ತಿಳಿಸಿ ರೋಗಿಯ ಪರಿಚಯ ಹೇಳಲಾಗುತ್ತಿದೆ. ಇದು ರೋಗಿ ಮತ್ತು ಅವರ ಕುಟುಂಬಸ್ಥರನ್ನು ಮಾನಸಿಕವಾಗಿ ಹಿಂಸಿಸುತ್ತಿವೆ. ದಯವಿಟ್ಟು ಇಂತಹ ಅಮಾನವೀಯ ಪ್ರಕಟಣೆಯ ವಿರುದ್ಧ ಅಗತ್ಯ ಕ್ರಮ ಜರುಗಿಸ ಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.