BANTWAL
ಮತಾಂತರಕ್ಕೆ ಯತ್ನ, ಇಬ್ಬರು ಪೋಲೀಸ್ ವಶಕ್ಕೆ ?

ಬಂಟ್ವಾಳ, ಸೆಪ್ಟಂಬರ್ 5: ಮತಾಂತರಕ್ಕೆ ಯತ್ನಿಸುತ್ತಿದ್ದಾರೆ ಎನ್ನುವ ಆರೋಪಗಳ ಹಿನ್ನಲೆಯಲ್ಲಿ ಗ್ರಾಮಸ್ಥರು ಇಬ್ಬರು ಯುವತಿಯರನ್ನು ಬಂಟ್ವಾಳ ಗ್ರಾಮಾಂತರ ಪೋಲೀಸರ ವಶಕ್ಕೆ ನೀಡಿರುವ ವಿಚಾರ ತಿಳಿದುಬಂದಿದೆ.
ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾವಳಪಡ್ನೂರು ಗ್ರಾಮದ ಉಗ್ಗಬೆಟ್ಟು ಎನ್ನುವ ಗ್ರಾಮೀಣ ಭಾಗದಲ್ಲಿ ಇರುವ ಮನೆಗಳಿಗೆ ಧರ್ಮವೊಂದಕ್ಕೆ ಸಂಬಂಧಪಟ್ಟ ಪುಸ್ತಕವನ್ನು ಮನೆ ಮಂದಿಗೆ ನೀಡುತ್ತಿದ್ದಾರೆ ಮತ್ತು ಮನೆಮಂದಿಯನ್ನು ಮತಾಂತರಕ್ಕೆ ಯತ್ನಿಸುತ್ತಿದ್ದಾರೆ ಎನ್ನುವ ಆರೋಪದಡಿ ಸ್ಥಳೀಯ ಗ್ರಾಮಸ್ಥರು ಇಬ್ಬರು ಯುವತಿಯರನ್ನು ಸುತ್ತುವರಿದು ವಿಚಾರಿಸಿದ್ದಾರಲ್ಲದೆ, ಹೆಚ್ಚಿನ ತನಿಖೆಗಾಗಿ ಬಂಟ್ವಾಳ ಗ್ರಾಮಾಂತರ ಪೋಲೀಸರಿಗೆ ಒಪ್ಪಿಸಿದ್ದಾರೆ ಎನ್ನುವುದು ತಿಳಿದುಬಂದಿದೆ.

ಹೆಚ್ಚಾಗಿ ಅನಕ್ಷರಸ್ಥರೇ ಹಾಗೂ ಕೃಷಿ ಚಟುವಟಿಕೆಗಳಲ್ಲೇ ತೊಡಗಿಕೊಂಡಿರುವ ಕುಟುಂಬಗಳು ಇಲ್ಲಿದ್ದು, ಮನೆಯಲ್ಲಿ ಮಹಿಳೆಯರು ಇರುವ ಸಂದರ್ಭ ನೋಡಿ ಮನೆಗೆ ಪ್ರವೇಶಿಸುತ್ತಿದ್ದರೆಂದು ಗ್ರಾಮಸ್ಥರ ಆರೋಪವಾಗಿದೆ.
ಕ್ರೈಸ್ತ ಧರ್ಮಕ್ಕೆ ಸೇರಿದ ಪುಸ್ತಕಗಳನ್ನು ಮನೆ ಮಂದಿಗೆ ನೀಡಿ ಆ ಧರ್ಮದ ಬಗ್ಗೆ ಪ್ರಚಾರ ನಡೆಸುತ್ತಿದ್ದರೆಂದೂ ಗ್ರಾಮಸ್ಥರ ಆರೋಪವಾಗಿದೆ.