LATEST NEWS
‘ರಾಜ್ಯ ಸರ್ಕಾರದಿಂದಲೇ ಮಂಗಳೂರಿನಲ್ಲಿ ಅರಾಜಕತೆ ಸೃಷ್ಟಿಸುವ ಹುನ್ನಾರ’ ; ಶಾಸಕ ವೇದವ್ಯಾಸ್ ಕಾಮತ್ ಆರೋಪ
ಮಂಗಳೂರು : ರಾಜ್ಯ ಸರ್ಕಾರದಿಂದಲೇ ಮಂಗಳೂರಿನಲ್ಲಿ ಅರಾಜಕತೆ ಸೃಷ್ಟಿಸುವ ಹುನ್ನಾರ ನಡೆದಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಮೈಸೂರು ಮುಡಾ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ವಿಚಾರಣೆಗೆ ಮಾನ್ಯ ರಾಜ್ಯಪಾಲರು ಅನುಮತಿ ನೀಡಿದ್ದು, ಪಾರದರ್ಶಕ ತನಿಖೆಗೆ ಅನುವಾಗುವಂತೆ ಕೂಡಲೇ ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು ಎಂದು ಆಗ್ರಹಿಸಿದರು.
ಈಗಾಗಲೇ ರಾಷ್ಟ್ರಮಟ್ಟದಲ್ಲಿ ಈ ಪ್ರಕರಣ ಸದ್ದು ಮಾಡಿದ್ದು ಇಡೀ ದೇಶವೇ ಕರ್ನಾಟಕವನ್ನು ಅನುಮಾನದ ಕಣ್ಣುಗಳಿಂದ ನೋಡುತ್ತಿದೆ. ಈ ಸಂದರ್ಭದಲ್ಲಿ “ನಾನು ರಾಜೀನಾಮೆ ನೀಡುವುದಿಲ್ಲ, ಬೇಕಾದರೆ ರಾಜ್ಯಪಾಲರೇ ರಾಜೀನಾಮೆ ನೀಡಲಿ” ಎಂದು ಮೊಂಡುತನ ಪ್ರದರ್ಶಿಸಿದ ಮುಖ್ಯಮಂತ್ರಿಗಳಿಗೆ ಮಂಗಳೂರಿನಲ್ಲಿ ಕಾಂಗ್ರೆಸ್ಸಿನ ಪುಂಡಪೋಕರಿಗಳು ಬಸ್ಸಿಗೆ ಕಲ್ಲು ತೂರಿ ಸಾರ್ವಜನಿಕರಲ್ಲಿ ಭಯಭೀತ ವಾತಾವರಣ ಸೃಷ್ಟಿಸುವ ಮೂಲಕ ಬೆಂಬಲ ನೀಡಿದ್ದಾರೆ.
ಕಲ್ಲೆಟಿನಿಂದ ಗಾಯಗೊಂಡ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಪೊಲೀಸರು ಕಾಂಗ್ರೆಸ್ಸಿನ ಆರೋಪಿಗಳಿಗೆ ಠಾಣೆಯಲ್ಲಿ ಜಾಮೀನು ನೀಡಿ ಗೌರವಯುತವಾಗಿ ಬಿಟ್ಟು ಕಳುಹಿಸುವ ಮಟ್ಟಿಗೆ ಪೊಲೀಸ್ ಇಲಾಖೆ ನಿಷ್ಕ್ರಿಯವಾಗಿರುವುದು ಜಿಲ್ಲೆಯ ಜನತೆಯ ದೌರ್ಭಾಗ್ಯ. ಈ ಬಗ್ಗೆ ಬಸ್ ಮಾಲಕರ-ಚಾಲಕರ ತೀವ್ರ ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯನವರಾಗಲೀ, ಕಾಂಗ್ರೆಸ್ಸಿನವರಾಗಲೀ ಯಾರೂ ಕೂಡಾ ಸಂವಿಧಾನಕ್ಕೆ, ಕಾನೂನಿಗೆ ಅತೀತರಲ್ಲ ಎಂಬುದು ನೆನಪಿರಲಿ ಎಂದು ಎಚ್ಚರಿಸಿದರು.
ಬಾಂಗ್ಲಾದಲ್ಲಿ ನಡೆದ ದಂಗೆಯಂತೆ ಇಲ್ಲೂ ನಡೆಸಿ ರಾಜ್ಯಪಾಲರ ಕಚೇರಿಗೆ ನುಗ್ಗಿ ಅವರನ್ನು ಓಡಿಸುತ್ತೇವೆ ಎಂದಿರುವ ಐವನ್ ಡಿಸೋಜ ರಂತಹ ದಲಿತ ವಿರೋಧಿ ಕಾಂಗ್ರೆಸ್ಸಿಗರ ಮೇಲೆ ಸ್ವಯಂ ಪ್ರೇರಿತವಾಗಿ ಸುಮೋಟೋ ಕೇಸ್ ದಾಖಲಿಸಿಕೊಳ್ಳುವುದನ್ನು ಬಿಟ್ಟು ಯಾರಾದರೂ ದೂರು ನೀಡಿದರೆ ಕ್ರಮ ಕೈಗೊಳ್ಳುತ್ತೇವೆ ಎನ್ನುವ ಪೊಲೀಸರು ಸಿದ್ದರಾಮಯ್ಯನವರ ಮೇಲೆ ಯಾರೋ ಸಾಮಾಜಿಕ ಜಾಲತಾಣದಲ್ಲಿ ಗೀಚಿದ್ದಕ್ಕೆ ಹೇಗೆ ಸುಮೊಟೊ ಕೇಸ್ ದಾಖಲಿಸಿಕೊಂಡರು? ವಾರ್ಡ್ ಮಟ್ಟದಲ್ಲಿಯೂ ಚುನಾವಣೆಗೆ ನಿಂತು ಗೆಲ್ಲಲಾಗದಂತಹ ವ್ಯಕ್ತಿಗಳು ಸಿದ್ದರಾಮಯ್ಯನವರಿಗೆ ಬಕೆಟ್ ಹಿಡಿದುಕೊಂಡು ಭಿಕ್ಷೆಯ ರೂಪದಲ್ಲಿ ಸೀಟು ಗಿಟ್ಟಿಸಿಕೊಂಡು ಅದರ ಋಣ ಸಂದಾಯಕ್ಕಾಗಿ ಗೌರವಾನ್ವಿತ ರಾಜ್ಯಪಾಲರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುವುದು ಅಕ್ಷಮ್ಯ. ಕೂಡಲೇ ಭ್ರಷ್ಟಾಚಾರದ ಜೊತೆಗೆ ಅಟ್ರಾಸಿಟಿ ಕೇಸ್ ಕೂಡಾ ದಾಖಲಾಗಬೇಕು ಎಂದು ಶಾಸಕರು ಆಗ್ರಹಿಸಿದರು