LATEST NEWS
ಕೊಚ್ಚಿಯಲ್ಲಿ ಕಾಂಗ್ರೇಸ್ ಮೇಯರ್ ಅಭ್ಯರ್ಥಿಯನ್ನು ಕೇವಲ 1 ಮತದಿಂದ ಸೋಲಿಸಿದ ಬಿಜೆಪಿ…..
ಕೊಚ್ಚಿ, ಡಿಸೆಂಬರ್ 16: ಕೇರಳ ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣಾ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಕಾಂಗ್ರೇಸ್ ನೇತೃತ್ವದ ಯು.ಡಿ.ಎಫ್ ಹಾಗೂ ಕಮ್ಯುನಿಷ್ಟ್ ಪಾರ್ಟಿ ನೇತೃತ್ವದ ಎಲ್.ಡಿ.ಎಫ್ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ತೋರಿದ್ದು, ಇದೇ ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಎನ್.ಡಿ.ಎ ಕೂಡಾ ಕೇರಳದಲ್ಲಿ ಹಲವು ಕಡೆಗಳಲ್ಲಿ ಗೆಲುವಿನ ನಗೆ ಬೀರಿದೆ.
ಕೊಚ್ಚಿ ನಗರಪಾಲಿಕೆಗೆ ನಡೆದ ಚುನಾವಣಾ ಫಲಿತಾಂಶ ಎಣಿಕೆ ಕಾರ್ಯ ಮುಂದುವರಿದಿದ್ದು, ಈ ಬಾರಿ ಕಾಂಗ್ರೇಸ್ ಪಕ್ಷಕ್ಕೆ ಬಿಜೆಪಿ ಪಕ್ಷ ಕೊಚ್ಚಿ ನಗರಪಾಲಿಕೆಯಲ್ಲಿ ಭಾರೀ ಹೊಡೆತ ನೀಡಿದೆ . ಕಾಂಗ್ರೇಸ್ ನ ಮೇಯರ್ ಸ್ಥಾನದ ಅಭ್ಯರ್ಥಿ ಎನ್. ವೇಣುಗೋಪಾಲ್ ಬಿಜೆಪಿಯ ಪದ್ಮಕುಮಾರಿ ಮುಂದೆ ಒಂದು ಓಟುಗಳ ಸೋಲು ಕಂಡಿದ್ದಾರೆ. ಕೊಚ್ಚಿ ನಗರಪಾಲಿಕೆಯಲ್ಲಿ ಎನ್. ವೇಣುಗೋಪಾಲ್ ಹಲವು ವರ್ಷಗಳಿಂದ ಕಾಂಗ್ರೇಸ್ ಮುಖಂಡರಾಗಿ ಗುರುತಿಸಿಕೊಂಡಿದ್ದು, ಈ ಬಾರಿಯ ಸೋಲು ಕಾಂಗ್ರೇಸ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಎಲ್.ಡಿ.ಎಫ್ ಹಾಗೂ ಯು.ಡಿ.ಎಫ್ ನ ನೇರ ಹಿಡಿತದಲ್ಲಿರುವ ಕೊಚ್ಚಿ ನಗರಪಾಲಿಕೆಯಲ್ಲಿ ಎನ್.ಡಿ.ಎ ಅಭ್ಯರ್ಥಿ ಗೆಲುವು ಸಾಧಿಸಿರುವುದು ಕೇರಳದಲ್ಲಿ ಬಿಜೆಪಿ ಪಕ್ಷ ನೆಲೆ ಕಂಡುಕೊಳ್ಳುತ್ತಿರುವ ಸಂಕೇತವೆಂದೂ ರಾಜಕೀಯ ವಿಶ್ಲೇಷಕರು ವಿಶ್ಲೇಷಿಸುತ್ತಿದ್ದಾರೆ. ತಿರುವನಂತಪುರ ಪಾಲಿಕೆಯಲ್ಲಿ ಬಿಜೆಪಿ 13 ಸ್ಥಾನಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದ್ದು, ಈ ಬಾರಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದೆ.