KARNATAKA
ರಾಮಮಂದಿರ ಉದ್ಘಾಟನೆಯ ಆಹ್ವಾನ ತಿರಸ್ಕರಿಸಿದ ಕಾಂಗ್ರೆಸ್..!
ಬೆಂಗಳೂರು: ಅಯೋಧ್ಯೆಯಲ್ಲಿ ಜನವರಿ 22ರಂದು ನಡೆಯುವ ರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಆಹ್ವಾನವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಲೋಕಸಭೆಯಲ್ಲಿ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಗೌರವಯುತವಾಗಿ ತಿರಸ್ಕರಿಸಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ.
ಇದು ಆರ್‌ಎಸ್‌ಎಸ್ ಹಾಗೂ ಬಿಜೆಪಿ ಕಾರ್ಯಕ್ರಮವಾಗಿದೆ ಆದ್ದರಿಂದ ಇವರು ಪಾಲ್ಗೊಳ್ಳುವುದಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ‘ರಾಮನನ್ನು ದೇಶದ ಕೋಟ್ಯಂತರ ಮಂದಿ ಪೂಜಿಸುತ್ತಾರೆ. ಧರ್ಮ ಎನ್ನುವುದು ವೈಯಕ್ತಿಕ ವಿಷಯ. ಆದರೆ ಅಯೋಧ್ಯೆಯ ದೇವಸ್ಥಾನವನ್ನು ಬಿಜೆಪಿ ಹಾಗೂ ಆರ್‌ಎಸ್‌ಎಸ್ ರಾಜಕೀಯ ವಿಷಯವನ್ನಾಗಿ ಮಾಡಿಕೊಂಡಿದೆ. ಚುನಾವಣಾ ಲಾಭಕ್ಕಾಗಿ ಬಿಜೆಪಿ ಹಾಗೂ ಆರ್‌ಎಸ್‌ಎಸ್ ನಾಯಕರು ಅಪೂರ್ಣಗೊಂಡಿರುವ ದೇಗುಲವನ್ನು ಉದ್ಘಾಟಿಸುತ್ತಿದ್ದಾರೆ. ಕೊಟ್ಯಂತರ ರಾಮ ಭಕ್ತರ ಭಾವನೆಗಳನ್ನು ಗೌರವಿಸುತ್ತಾ 2019ರಲ್ಲಿ ರಾಮಮಂದಿರ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ಕಾಂಗ್ರೆಸ್ ಬದ್ಧವಿದೆ. ಆರ್‌ಎಸ್‌ಎಸ್, ಬಿಜೆಪಿ ಕಾರ್ಯಕ್ರಮದ ಆಹ್ವಾನವನ್ನು ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ಅಧೀರ್ ರಂಜನ್ ಚೌಧರಿ ಅವರು ಗೌರವಪೂರ್ವಕವಾಗಿ ತಿರಸ್ಕರಿಸಿದ್ದಾರೆ’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.