Connect with us

  DAKSHINA KANNADA

  ಯಾವ ಧಾರ್ಮಿಕ ಕಾರ್ಯಕ್ರಮಗಳೂ ನಡೆಯದೆ ಈ ಮಂತ್ರಾಕ್ಷತೆ ಎಲ್ಲಿಂದ ಬಂತು ಇದು ಪಕ್ಕಾ ರಾಜಕೀಯ ಪೂಜೆ

  ಪುತ್ತೂರು ಜನವರಿ 19: ರಾಮಮಂದಿರ ನಿರ್ಮಾಣಕ್ಕೆ ಕಾಂಗ್ರೇಸ್ ಯಾವುತ್ತೂ ವಿರೋಧ ವ್ಯಕ್ತಪಡಿಸಿಲ್ಲ. ಅಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ಕಲ್ಪಿಸಿಕೊಟ್ಟಿರುವುದು ಮಾಜಿ ಪ್ರಧಾನಿಗಳಾದ ನೆಹರು ಹಾಗೂ ರಾಜೀವ ಗಾಂಧಿ. ಆದರೆ ಶ್ರೀರಾಮ ಪ್ರಾಣಪ್ರತಿಷ್ಠಾಪನೆಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿಯ ನಡೆಯ ಬಗ್ಗೆ ನಮ್ಮ ವಿರೋಧವಿದೆ. ಮಂತ್ರಾಕ್ಷತೆ ಹೆಸರಲ್ಲಿ ಜನತೆಯನ್ನು ಮರುಳು ಮಾಡುವ ಹಾಗೂ ಪ್ರಾಣಪ್ರತಿಷ್ಠಾಪನೆಯ ಸಮಯದಲ್ಲಿ ತಂತ್ರಿಗಳನ್ನು ಬದಿಗಿಟ್ಟು ರಾಜಕಾರಣಿಗಳು ಗರ್ಭ ಗುಡಿ ಪ್ರವೇಶಿಸುವ ಮೂಲಕ ಹಿಂದೂ ಸಂಪ್ರದಾಯಕ್ಕೆ ಅಪಚಾರ ಮಾಡುವ ಕೃತ್ಯದ ಬಗ್ಗೆ ನಮ್ಮ ವಿರೋಧವಿದೆ ಎಂದು ಕೆಪಿಸಿಸಿ ವಕ್ತಾರ ಅಮಲ ರಾಮಚಂದ್ರ ಹೇಳಿದರು.


  ಶುಕ್ರವಾರ ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಮಂತ್ರಾಕ್ಷತೆ ಎಂಬುವುದು ಪ್ರಾಣಪ್ರತಿಷ್ಠೆಯಾದ ಬಳಿಕ ಪೂಜಾ ಕಾರ್ಯಗಳು ನಡೆದ ಬಳಿಕ ನೀಡುವುದು ಕ್ರಮ. ಆದರೆ ಯಾವ ಧಾರ್ಮಿಕ ಕಾರ್ಯಕ್ರಮಗಳೂ ನಡೆಯದೆ ಈ ಮಂತ್ರಾಕ್ಷತೆ ಎಲ್ಲಿಂದ ಬಂತು. ಇದು ಪಕ್ಕಾ ರಾಜಕೀಯ. ಪೂಜಾ ಕಾರ್ಯಕ್ರಮ ನಡೆದ ಬಳಿಕ ಸಿಗಬೇಕಾದ ಮಂತ್ರಾಕ್ಷತೆಯನ್ನು ಮನೆ ಮನೆಗೆ ಹಂಚುವ ಮೂಲಕ ಈ ಮಂತ್ರಾಕ್ಷತೆಯ ಮಹತ್ವವನ್ನು ಹಾಳು ಕೀರ್ತಿ ಬಿಜೆಪಿ ಮತ್ತು ಸಂಘಪರಿವಾರಕ್ಕೆ ಸಂದಾಯವಾಗಿದೆ. ಪುತ್ತೂರಿನ ಮುಂಡೂರಿನಲ್ಲಿ ಜಾಗದ ವಿವಾದದ ಹಲ್ಲೆಯನ್ನು ಮಂತ್ರಾಕ್ಷತೆ ಹಂಚುವ ವಿಚಾರದಲ್ಲಿ ನಡೆದಿದೆ ಎಂದು ತಿರುಚಿದ ಮಾಜಿ ಶಾಸಕ ಸಂಜೀವ ಮಠಂದೂರು ಅವರೇ ಮಂತ್ರಾಕ್ಷತೆ ರಾಜಕೀಯ ಎಂಬುವುದನ್ನು ಸಾಬೀತು ಪಡಿಸಿದ್ದಾರೆ. ಪುತ್ತೂರಿನ ಬಿಜೆಪಿಯ ಬಣಗಳು ಒಂದಾದರೆ ನಮ್ಮ ಅಸ್ತಿತ್ವಕ್ಕೆ ಧಕ್ಕೆ ಬರುವುದು ಎಂಬ ಭಯದಿಂದ ಈ ಮಂತ್ರಾಕ್ಷತೆ ವಿಚಾರವನ್ನು ಮಾಜಿ ಶಾಸಕರು ಎಳೆದು ತಂದಿದ್ದಾರೆ ಎಂದು ಅವರು ಆರೋಪಿಸಿದರು.

  ದೇವಮಂದಿರಗಳಲ್ಲಿ ವಿಗ್ರಹಗಳಿಗೆ ಪ್ರಾಣಪ್ರತಿಷ್ಠೆ ನೀಡುವುದು ತಂತ್ರಿಗಳ ಕೆಲಸ. ಆದರೆ ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣಪ್ರತಿಷ್ಠಾಪನೆಯ ಸಂದರ್ಭ ಗರ್ಭ ಗುಡಿಗೆ ಹೋಗುವುದು ಪ್ರಧಾನಿ ಮೋದಿ, ಯೋಗಿ, ಮೋಹನ್ ಭಾಗವತ್, ಆನಂದಿಬೆನ್ ಮತ್ತು ಅರ್ಚಕ. ರಾಷ್ಟ್ರದ ಪ್ರಥಮ ಪ್ರಜೆಯಾದ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರಿಗೂ ಗರ್ಭಗುಡಿಗೆ ಹೋಗಲು ಅವಕಾಶ ಇಲ್ಲ. ಅಪೂರ್ಣವಾದ ದೇವಮಂದಿರದಲ್ಲಿ ವಿಗ್ರಹ ಪ್ರತಿಷ್ಠೆ ಮಾಡುವ ಯಾವ ಇತಿಹಾಸದ ಉದಾಹರಣೆ ಭಾರತದಲ್ಲಿ ನಡೆದಿಲ್ಲ. ಸೋಮನಾಥ ದೇವಳದಲ್ಲಿ ನೆಹರು ಪ್ರಧಾನಿಯಾಗಿದ್ದಾಗ ಪ್ರಾಣಪ್ರತಿಷ್ಠಾ ಕಾರ್ಯಕ್ರಮ ನಡೆದಿತ್ತು. ಆದರೆ ಗರ್ಭಗುಡಿಗೆ ನೆಹರು ಹೋಗಿಲ್ಲ. ಹಾಗಾಗಿ ಇದೊಂದು ಕೀಳುಮಟ್ಟದ ರಾಜಕೀಯ. ಹಿಂದೂ ಸಂಸ್ಕೃತಿಯನ್ನು ಅವಹೇಳನ ಮಾಡುವ ಕೃತ್ಯ. 2025ಕ್ಕೆ ರಾಮಮಂದಿರ ಪೂರ್ಣಗೊಂಡ ನಂತರವೇ ಪ್ರಾಣಪ್ರತಿಷ್ಠೆ ಮಾಡಬಹುದಿತ್ತು. ಯಾಕೆ ಈ ತರಾತುರಿ ಎಂದು ಪ್ರಶ್ನಿಸಿದ ಅವರು ಅಭಿವೃದ್ಧಿ ಮಾಡದ, ಸಮಸ್ಯೆಗಳನ್ನು ಮರೆಮಾಚುವ ದೃಷ್ಟಿಯಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಮನ ಹೆಸರಲ್ಲಿ ಮತ ಗಳಿಸುವ ಏಕೈಕ ಅಜೆಂಡಾ ಬಿಜೆಪಿಯದ್ದಾಗಿದೆ. ಇದರಿಂದ ನಿಜವಾದ ಹಿಂದೂ ವಿರೋಧಿಗಳು ಯಾರು ಎಂಬುವುದು ಸ್ಪಷ್ಟವಾಗುತ್ತದೆ ಎಂದು ಅವರು ಹೇಳಿದರು.

  Share Information
  Advertisement
  Click to comment

  You must be logged in to post a comment Login

  Leave a Reply