ಪುತ್ತೂರು ಡಿಸೆಂಬರ್ 21: ಕೇಪು ಕೋಳಿ ಅಂಕ ಪ್ರಕರಣದಲ್ಲಿ ಪೊಲೀಸರು ಕಾಂಗ್ರೇಸ್ ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಎಫ್.ಐ.ಆರ್ ದಾಖಲಿಸಿರುವುದಕ್ಕೆ ಕಾಂಗ್ರೇಸ್ ಮುಖಂಡರು ಪೊಲೀಸರ ವಿರುದ್ದ ಗರಂ ಆಗಿದ್ದಾರೆ.

ಪುತ್ತೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಪೊಲೀಸರ ವರ್ತನೆ ಖಂಡಿಸಿದ್ದು, ಶಾಸಕರ ಮೇಲೆ ಪೋಲೀಸರು ಪ್ರಕರಣ ದಾಖಲಿಸಿರುವುದು ಖಂಡನಾರ್ಹ, ಕೂಡಲೇ ಪೋಲೀಸರು ಶಾಸಕರ ವಿರುದ್ಧ ದಾಖಲಿಸಿದ ಪ್ರಕರಣವನ್ನು ಹಿಂಪಡೆಯಬೇಕು, ಇಲ್ಲದೇ ಹೋದಲ್ಲಿ ಗೃಹಸಚಿವರನ್ನು ಭೇಟಿ ಮಾಡಿ ಪ್ರಕರಣ ಕೈ ಬಿಡುವಂತೆ ಮನವಿ ಮಾಡಲಾಗುವುದು ಎಂದರು.
Read This – ಕೇಪು ಕೋಳಿ ಅಂಕ – ಕಾಂಗ್ರೇಸ್ ಸರಕಾರ ಪೋಲೀಸರಿಂದ ಕರಾವಳಿಯ ಸಂಪ್ರದಾಯವನ್ನು ಮುಗಿಸುವ ಪ್ರಯತ್ನ ಮಾಡಿದೆ – ಸತೀಶ್ ಕುಂಪಲ
ಕೇಪು ಉಳ್ಳಾಲ್ತಿ ದೈವಸ್ಥಾನದ ಬಳಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಪೋಲೀಸರು ದಾಳಿ ಮಾಡಿದ್ದರು, ಆ ಸಂದರ್ಭದಲ್ಲಿ ಶಾಸಕರು ಅದನ್ನು ತಡೆದು ಕೋಳಿ ಅಂಕಕ್ಕೆ ಅವಕಾಶ ನೀಡಿದ್ದರು. ಕೇಪು ಕ್ಷೇತ್ರದಲ್ಲಿ ಕಳೆದ 400–500 ವರ್ಷಗಳಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ತಲೆತಲಾಂತರದಿಂದ ಬಂದ ಸಂಪ್ರದಾಯವನ್ನು ನಿಲ್ಲಿಸಿ ಎನ್ನುವುದು ಸರಿಯಲ್ಲ.
Read This – ಕೇಪು – ಕೋಳಿ ಅಂಕ ನಡೆಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮೇಲೆ ಎಫ್ಐಆರ್
ಊರಿನ ಕೃಷಿಕರೆಲ್ಲಾ ಸೇರಿ ಮಾಡುವಂತಹ ಕೋಳಿ ಅಂಕ, ಈ ಕೋಳಿ ಅಂಕದಲ್ಲಿ ಜೂಜಾಟವೂ ನಡೆಯುತ್ತಿಲ್ಲ. ಈ ವಿವರವನ್ನು ಹೇಳುವ ಸಂದರ್ಭದಲ್ಲಿ ಪೋಲೀಸರು ಅಲ್ಲಿ ನೆರೆದಿದ್ದವರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಆ ಸಂದರ್ಭದಲ್ಲಿ ಶಾಸಕರು ಒಂದು ವಿಚಾರ ಹೇಳಿದ್ದರು. ಅಲ್ಲಿ ಇದ್ದವರ ಕೈಯಲ್ಲಿ ಹರಿತವಾದ ಆಯುಧಗಳಿವೆ. ಏನಾದರೂ ಹೆಚ್ಚುಕಡಿಮೆ ಆದಲ್ಲಿ ಆಯುಧಗಳು ಪೋಲೀಸರನ್ನೂ ಗಾಯಗೊಳಿಸಬಹುದು, ಆ ಕಾರಣಕ್ಕೆ ಪೋಲೀಸರು ಸಾರ್ವಜನಿಕರ ಜೊತೆ ಸೌಜನ್ಯದಿಂದ ಇರಬೇಕೆಂದಿದ್ದಾರೆ. ಆ ಹೇಳಿಕೆಯಲ್ಲಿ ಯಾವುದೇ ಕೋಮು ಭಾವನೆ ಕರೆಳಿಸುವ, ಪ್ರಚೋದನಾಕಾರಿ ಉದ್ಧೇಶವೂ ಇರಲಿಲ್ಲ. ವಿಟ್ಲ ಪೋಲೀಸರು ಮತ್ತು ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಪ್ರಕರಣವನ್ನು ರದ್ದುಗೊಳಿಸಬೇಕು, ಹಾಗೂ ಶಾಸಕರ ಜೊತೆ ಇತರ 16 ಜನರ ಮೇಲಿನ ಪ್ರಕರಣವನ್ನೂ ಹಿಂಪಡೆಯಬೇಕು ಎಂದರು.