ವಿಟ್ಲ ಡಿಸೆಂಬರ್ 20: ವಿಟ್ಲ ಸಮೀಪದ ಕೇಪು ಉಳ್ಳಾಲ್ತಿಯ ವಾರ್ಷಿಕ ಉತ್ಸವ ನೆಪದಲ್ಲಿ ಕೋಳಿ ಅಂಕ ನಡೆಸುವಂತೆ ಹೇಳಿ ಅಕ್ರಮಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ ಒಟ್ಟು 17 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಶನಿವಾರ ಮಧ್ಯಾಹ್ನ ಕೇಪು ಗ್ರಾಮದ ಮುರಳೀಧರ ರೈ ಎಂಬವರ ಗದ್ದೆಯಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ವಿಟ್ಲ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸಾರ್ವಜನಿಕರಿಗೆ ಕಾನೂನುಬಾಹಿರ ಕೃತ್ಯದ ಕುರಿತು ಎಚ್ಚರಿಕೆ ನೀಡಲಾಗಿತ್ತು.

ಕೇಪು ಜಾತ್ರೆಯಲ್ಲಿ ಕೋಳಿ ಅಂಕ ನಡೆಸುವುದಕ್ಕೆ ಪೊಲೀಸರು ಅಡ್ಡಪಡಿಸಿದ್ದಾರೆಂದು ಸಾರ್ವಜನಿಕರ ದೂರಿನಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಅಶೋಕ್ ರೈ, ಇಲ್ಲಿ ಜೂಜು ರಹಿತ ಕೋಳಿ ಅಂಕ ನಡೆಸುವುದು ಹಿಂದಿನಿಂದ ಬಂದ ಸಂಪ್ರದಾಯ. ಪೊಲೀಸರು ಕೇಸು ಮಾಡುವುದಕ್ಕೆ ಇಲ್ಲೇನೂ ಜೂಜು ಇಲ್ಲ, ಹಾಗೆ ನೋಡಿದರೆ ಕ್ರಿಕೆಟ್ ಬೆಟ್ಟಿಂಗ್ ಮಾಡಲ್ವಾ.. ಎಂದು ಸ್ಥಳದಲ್ಲಿದ್ದ ವಿಟ್ಲ ಎಸ್ಐಯನ್ನು ಪ್ರಶ್ನಿಸಿದ್ದರು. ಅಶೋಕ್ ರೈ ಅಲ್ಲಿ ಸೇರಿದ್ದ ಜನರಿಗೆ ಕೋಳಿ ಅಂಕವನ್ನು ಮುಂದುವರಿಸುವಂತೆ ಪ್ರಚೋದನೆ ಮತ್ತು ಪ್ರೇರಣೆ ನೀಡಿದ್ದಾರೆ ಎನ್ನಲಾಗಿದೆ. ಶಾಸಕರ ಪ್ರಚೋದನೆಯಿಂದ ಜನರು ಕಾನೂನು ಬಾಹಿರವಾಗಿ ಕೋಳಿ ಅಂಕ ಪ್ರಾರಂಭಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೋಳಿ ಅಂಕದ ಸ್ಥಳದಲ್ಲಿ ಪೊಲೀಸರು ಬಿಗಿ ಭದ್ರತೆಯೊಂದಿಗೆ ಕಾರ್ಯಾಚರಣೆ ನಡೆಸಿ, ಸ್ಥಳದಲ್ಲಿದ್ದ 16 ಮಂದಿಯ ವಶಕ್ಕೆ ಪಡೆದಿದ್ದಾರೆ. ದಾಳಿಯ ವೇಳೆ 22 ಹುಂಜಗಳು ಮತ್ತು ಕೋಳಿ ಅಂಕಕ್ಕೆ ಬಳಸುವ ಬಾಳು (ಕತ್ತಿಗಳನ್ನು) ವಶಕ್ಕೆ ಪಡೆಯಲಾಗಿದೆ. ಸ್ಥಳದ ಮಾಲೀಕ ಮುರಳೀಧರ ರೈ ಅವರ ಮೇಲೆ ಪರವಾನಿಗೆ ಇಲ್ಲದೆ ಅಕ್ರಮ ಕೃತ್ಯಕ್ಕೆ ಜಾಗ ನೀಡಿದ ಆರೋಪ ಮೇಲೆ ಪ್ರಕರಣ ದಾಖಲಾಗಿದೆ. ಅಕ್ರಮ ಕೃತ್ಯಕ್ಕೆ ಪ್ರಚೋದನೆ ನೀಡಿದ ಆರೋಪ ಮೇಲೆ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಹಾಗೂ ಸ್ಥಳದಲ್ಲಿದ್ದ ಇತರ 16 ಜನರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.



