Connect with us

LATEST NEWS

ರೈಲ್ವೆ ಟಿಕೆಟ್ ನಲ್ಲಿ ಪ್ರಧಾನಿ ಮೋದಿ ಪೋಟೋ ಜೊತೆ ಅಪರೇಷನ್ ಸಿಂಧೂರ ಮಾಹಿತಿ – ವೋಟ್‌ ಬ್ಯಾಂಕಿಗಾಗಿ ಸರ್ಕಾರದ ಕುತಂತ್ರ ಎಂದ ವಿರೋಧ ಪಕ್ಷಗಳು

ಹೊಸ ದಿಲ್ಲಿ ಮೇ 20: ಪಹಲ್ಗಾಮ್ ನಲ್ಲಿ ಅಮಾಯಕ ಪ್ರವಾಸಿಗರ ಕೊಂದ ಭಯೋತ್ಪಾದಕ ದಾಳಿ ವಿರುದ್ದ ಭಾರತ ನಡೆಸಿದ ಅಪರೇಷನ್ ಸಿಂಧೂರ ಕುರಿತಂತೆ ಇದೀಗ ರೈಲ್ವೆ ಇಲಾಖೆ ತನ್ನ ಆನ್ ಲೈನ್ ಟಿಕೆಟ್ ಗಳಲ್ಲಿ ವಿವರಣೆಯನ್ನು ಪ್ರಿಂಟ್ ಮಾಡುತ್ತಿದೆ. ಇದು ಸದ್ಯ ವಿರೋಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಅಪರೇಷನ್ ಸಿಂದೂರ ಕುರಿತ ವಿವರದ ಜೊತೆ ಪ್ರಧಾನಿ ಮೋದಿ ಪೋಟೋ ವಿರೋಧ ಪಕ್ಷದವರನ್ನು ಕೆರಳಿಸಿದೆ.


ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮಿಲಿಟರಿ ಕಾರ್ಯಾಚರಣೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಮೇ 17 ರಂದು ಭೋಪಾಲ್-ಝಾನ್ಸಿ ಮಾರ್ಗದಲ್ಲಿ ಬುಕ್ ಮಾಡಿದ ಟಿಕೆಟ್‌ನಲ್ಲಿ, ‘ಆಪರೇಷನ್ ಸಿಂಧೂರ್’ ಕುರಿತು ಪ್ರಧಾನಿ ಮೋದಿ ಅವರ ಚಿತ್ರ ಮತ್ತು ವಿವರಣೆ ಇದೆ. ಈ ಬಗ್ಗೆ ಕಾಂಗ್ರೆಸ್ ಮತ್ತು ಬಿಎಸ್‌ಪಿ ಪಕ್ಷ ಟೀಕೆ ಮಾಡಿವೆ. ಭಾರತೀಯ ರೈಲ್ವೆ ಈ ಬಗ್ಗೆ ಪ್ರತಿಕ್ರಿಯಿಸಿ, ಇದು ದೇಶದ ಹೆಮ್ಮೆಯ ವಿಷಯ ಎಂದು ಹೇಳಿದೆ.

ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಅವರ ಮಾಧ್ಯಮ ಸಲಹೆಗಾರ ಪಿಯೂಷ್ ಬಬೆಲೆ ಅವರು ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿದ್ದು, IRCTC ಇ-ಟಿಕೆಟ್‌ನ ಫೋಟೋವನ್ನು ಹಂಚಿಕೊಂಡಿದ್ದಾರೆ. “ಮೋದಿ ಸರ್ಕಾರವು ಜಾಹೀರಾತು ಪ್ರಿಯವಾಗಿದೆ. ಅವರು ರೈಲ್ವೆ ಟಿಕೆಟ್‌ಗಳಲ್ಲಿ ‘ಆಪರೇಷನ್ ಸಿಂಧೂರ್’ ಅನ್ನು ಜಾಹೀರಾತಿನಂತೆ ಬಳಸುತ್ತಿದ್ದಾರೆ. ಮಿಲಿಟರಿಯ ಶೌರ್ಯವನ್ನು ಒಂದು ಉತ್ಪನ್ನದಂತೆ ಮಾರಾಟ ಮಾಡುತ್ತಿದ್ದಾರೆ. ಇದು ದೇಶಭಕ್ತಿಯಲ್ಲ, ವ್ಯಾಪಾರ” ಎಂದು ಪೋಸ್ಟ್‌ ಮಾಡಿದ್ದಾರೆ.

ಬಹುಜನ ಸಮಾಜ ಪಕ್ಷದ (BSP) ಸಂಸದ ಕುನ್ವರ್ ದಾನಿಶ್ ಅಲಿ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಈ ಜಾಹೀರಾತನ್ನು ಟೀಕಿಸಿದ್ದಾರೆ. “ಪ್ರಧಾನಿ ನರೇಂದ್ರ ಮೋದಿ ಅವರು ಯುದ್ಧ ಮತ್ತು ಹುತಾತ್ಮತೆಯನ್ನು ಅವಕಾಶಗಳಂತೆ ನೋಡುತ್ತಾರೆ. ಮುಗ್ಧ ನಾಗರಿಕರು ರಕ್ತ ಹರಿಸುತ್ತಿದ್ದರೆ ಮತ್ತು ಸೈನಿಕರು ಪ್ರಾಣವನ್ನು ಪಣಕ್ಕಿಟ್ಟು ಪಾಕಿಸ್ತಾನವನ್ನು ಎದುರಿಸುತ್ತಿರುವ ಹೊತ್ತಲ್ಲಿ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಹುತಾತ್ಮರ ಹೆಸರು ಅಥವಾ ಮುಖಗಳಿಲ್ಲ, ಕೇವಲ ಮೋದಿ ಅವರ ಚಿತ್ರ ಮತ್ತು ಪ್ರಚಾರವಿದೆ. ಇದು ಸ್ವಯಂ-ಮೋಹದ ಪರಮಾವಧಿಯಲ್ಲವೇ?” ಎಂದು ಅವರು ಎಕ್ಸ್‌ನಲ್ಲಿ ಟ್ವೀಟ್‌ ಮಾಡಿದ್ದಾರೆ.

 

ಈ ವಿವಾದದ ಬಗ್ಗೆ ರೈಲ್ವೆ ಮಂಡಳಿಯ ಅಧಿಕಾರಿ ದಿಲೀಪ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. “ಆಪರೇಷನ್ ಸಿಂಧೂರ್ ಅನ್ನು ಯಶಸ್ವಿಯಾಗಿ ನಡೆಸಿದ ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ನಮಗೆ ಹೆಮ್ಮೆ ಇದೆ. ಇಡೀ ದೇಶವು ಅವರ ಧೈರ್ಯವನ್ನು ಆಚರಿಸುತ್ತಿದೆ. ಗೌರವದ ಸಂಕೇತವಾಗಿ, ಭಾರತೀಯ ರೈಲ್ವೆ ಟಿಕೆಟ್‌ಗಳಲ್ಲಿ ಈ ಸಂದೇಶವನ್ನು ಹೈಲೈಟ್ ಮಾಡಲು ಮತ್ತು ತ್ರಿವರ್ಣ ಧ್ವಜದೊಂದಿಗೆ ನಿಲ್ದಾಣಗಳನ್ನು ಬೆಳಗಿಸಲು ನಿರ್ಧರಿಸಿದೆ. ಇದು ಆಪರೇಷನ್‌ನ ಯಶಸ್ಸಿನ ಸಂದೇಶವನ್ನು ಹರಡುವ ರಾಷ್ಟ್ರವ್ಯಾಪಿ ಅಭಿಯಾನ” ಎಂದು ಹೇಳಿದ್ದಾರೆ.

Share Information
Continue Reading
Advertisement
1 Comment

1 Comment

    Leave a Reply

    Your email address will not be published. Required fields are marked *