Connect with us

    DAKSHINA KANNADA

    ಅಂಕಣಕಾರ ಎಂ. ಜಿ. ಹೆಗಡೆಯವರ ಆತ್ಮಕಥೆ “ಚಿಮಣಿ ಬೆಳಕಿನಿಂದ” ಸೆ.22ರಂದು ಬಿಡುಗಡೆ

    ಮಂಗಳೂರು : ಶಿವಮೊಗ್ಗದ ಅಹರ್ನಿಶಿ ಪ್ರಕಾಶನವು ಪ್ರಕಟಿಸಿದ ಲೇಖಕ, ಅಂಕಣಕಾರ ಎಂ.ಜಿ. ಹೆಗಡೆಯವರ ಆತ್ಮಕಥೆ ‘ಚಿಮಣಿ ಬೆಳಕಿನಿಂದ’ 22 ಸೆಪ್ಟಂಬರ್ 2024ರಂದು ಸಂಜೆ 4 ಗಂಟೆಯಿಂದ 7.15ರತನಕ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಬಿಡುಗಡೆಯಾಗಲಿದೆ.

    ವಿಧಾನ ಪರಿಷತ್ ಸದಸ್ಯರಾದ  ಬಿ.ಕೆ.ಹರಿಪ್ರಸಾದ್ ಅವರು ಕಾರ್ಯಕ್ರಮದ ಉದ್ಘಾಟನೆ ನಡೆಸಿ ಪುಸ್ತಕ ಬಿಡುಗಡೆಯನ್ನು ಮಾಡಲಿರುವರು. ಗಾಂಧಿ ವಿಚಾರ ವೇದಿಕೆಯ ಅಧ್ಯಕ್ಷ  ಶ್ರೀಧರ ಭಿಡೆಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ಹಿರಿಯ ಲೇಖಿಕೆ ಶ್ರೀಮತಿ ಭುವನೇಶ್ವರಿ ಹೆಗಡೆಯವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುತ್ತಾರೆ. ಚಿಂತಕ  ಅರವಿಂದ ಚೊಕ್ಕಾಡಿಯವರು ಪುಸ್ತಕ ಪರಿಚಯವನ್ನು ಮಾಡಲಿದ್ದಾರೆ. ಸಭಾ ಕಾರ್ಯಕ್ರಮಕ್ಕಿಂತ ಮೊದಲು ಶ್ರೀಮತಿ ಭಾನುಮತಿ ಹೆಗಡೆ, ಶ್ರೀಮತಿ ಸಹನಾ ಭಟ್,  ಹುಸೇನ್ ಕಾಟಿಪಳ್ಳ ಅವರಿಂದ ಎಂ.ಜಿ.ಹೆಗಡೆಯವರು ರಚಿಸಿದ ಭಾವಗೀತೆಗಳ ಗಾಯನ ಇರುತ್ತದೆ.

    ಸಮಾರಂಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ  ತಾರಾನಾಥ ಗಟ್ಟಿ ಕಾಪಿಕಾಡ್, ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ  ಉಮರ್ ಯು.ಎಚ್, ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ  ಸ್ಪ್ಯಾನಿ ಜೋಕಿಂ, ವಿಶ್ವವಿದ್ಯಾನಿಲಯ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಉದಯ ಕುಮಾರ್ ಇರ್ವತ್ತೂರು, ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಉಪ ಕುಲಸಚಿವರಾದ ಡಾ. ಪ್ರಭಾಕರ ನೀರುಮಾರ್ಗ, ಸಿ.ಐ.ಎಲ್.ನ ನಿರ್ದೇಶಕ  ನಂದಗೋಪಾಲ, ಪುಸ್ತಕದ ಪ್ರಕಾಶಕರಾದ ಶ್ರೀಮತಿ ಅಕ್ಷತಾ ಹುಂಚದಕಟ್ಟೆ, ಶ್ರೀಮತಿ ನಾಗವೇಣಿ, ಶ್ರೀ ಸೀತಾರಾಮ ಹೆಗಡೆ, ಶ್ರೀ ಪ್ರಭಾಕರ ಹೆಗಡೆ ಹಸಲ್ಮನೆ, ಶ್ರೀ ಲಾತವ್ಯ ಆಚಾರ್ಯ, ಶ್ರೀಮತಿ ಲಕ್ಷ್ಮೀ ಹೆಗಡೆ, ಕುಮಾರ ಗಹನ ಹೆಗಡೆಯವರು ಅಭ್ಯಾಗತರಾಗಿ ಮುಖ್ಯ ಭೂಮಿಕೆಯಲ್ಲಿ ಉಪಸ್ಥಿತರಿರುತ್ತಾರೆ.

    ಗಾಂಧಿ ವಿಚಾರ ವೇದಿಕೆಯ ಸದಸ್ಯರೂ ಆಗಿರುವ ಎಂ.ಜಿ. ಹೆಗಡೆಯವರು ವೇದಿಕೆಯ ನಿಯಮದಂತೆ ರಾಜಕೀಯದಲ್ಲಿ ಸಕ್ರಿಯರಾಗಿರುವುದರಿಂದ ಗಾಂಧಿ ವಿಚಾರ ವೇದಿಕೆಯಲ್ಲಿ ಸಕ್ರಿಯರಾಗಿಲ್ಲ. ಆದರೆ ಅವರು ಗಾಂಧಿ ವಿಚಾರ ವೇದಿಕೆಯಲ್ಲೆ ಸಕ್ರಿಯರಾಗಿದ್ದಾಗ ವೇದಿಕೆಯ ಯೋಜನೆಯಾದ ಗಾಂಧೀಜಿಯವರ ಕುರಿತ ಅಪವ್ಯಾಖ್ಯಾನಗಳಿಗೆ ದಾಖಲೆ ಸಹಿತ ನೀಡಿದ ಉತ್ತರವಾಗಿದ್ದ, ಮೈಸೂರಿನ ರೂಪ ಪ್ರಕಾಶನವು ಪ್ರಕಟಿಸಿದ ‘ಮಿನುಗು ನೋಟ’ ಪುಸ್ತಕದ ಲೇಖಕರಾಗಿದ್ದರು. ಅಲ್ಲದೆ ಎಂ.ಜಿ.ಹೆಗಡೆಯವರ ಆತ್ಮಕಥೆಯಲ್ಲಿನ ಹಲವು ವಿವರಗಳು ಗಾಂಧಿ ಚಿಂತನೆಗಳಿಗೆ ಸಂವಾದ ರೂಪಿಯಾದ ವಿವರಗಳನ್ನು ಒಳಗೊಂಡಿದೆ. ಈ ನೆಲೆಯಲ್ಲಿ ಗಾಂಧಿ ವಿಚಾರ ವೇದಿಕೆಯು ಅಹರ್ನಿಶಿ ಪ್ರಕಾಶನ, ಆ‌ರ್.ಜಿ.ಫೌಂಡೇಷನ್ ಜೊತೆಗೂಡಿ ಈ ಬಿಡುಗಡೆ ಸಮಾರಂಭವನ್ನು ಆಯೋಜಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply