Connect with us

LATEST NEWS

ವಿಧಾನಸಭಾ ಚುನಾವಣೆ ಘೋಷಣೆ – ತಕ್ಷಣದಿಂದ ನೀತಿ ಸಂಹಿತೆ ಜಾರಿ- ಜಿಲ್ಲಾಧಿಕಾರಿ

ವಿಧಾನಸಭಾ ಚುನಾವಣೆ ಘೋಷಣೆ – ತಕ್ಷಣದಿಂದ ನೀತಿ ಸಂಹಿತೆ ಜಾರಿ- ಜಿಲ್ಲಾಧಿಕಾರಿ

ಉಡುಪಿ ಮಾರ್ಚ್ 27: ವಿಧಾನಸಭಾ ಕ್ಷೇತ್ರಗಳಿಗೆ ಸಾರ್ವತ್ರಿಕ ಚುನಾವಣೆ ಘೋಷಿಸಿದ್ದು, ತಕ್ಷಣದಿಂದ ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ. ಅವರು ಮಂಗಳವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಏಪ್ರಿಲ್ 17 ರಂದು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 24 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಆಗಲಿದೆ, 25 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, 27 ರಂದು ನಾಮಪತ್ರ ಹಿಂದೆಗೆದುಕೊಳ್ಳಲು ಕೊನೆಯ ದಿನವಾಗಿದ್ದು, ಮೇ 12 ರಂದು ರಾಜ್ಯಾದ್ಯಂತ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ, ಮೇ 15 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯಲ್ಲಿ ಫೆಬ್ರವರಿ 28 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದ್ದು, 5 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 9,78,503 ಮತದಾರರಿದ್ದು, 4,70,730 ಪುರುಷರು 507754 ಮಹಿಳಾ ಮತದಾರರು, 19 ಇತರರು ಇದ್ದಾರೆ, ಒಟ್ಟು 1078 ಮತಗಟ್ಟೆಗಳನ್ನು ತೆರೆದಿದ್ದು, 24 ಹೆಚ್ಚುವರಿ ಮತಗಟ್ಟೆ ಸ್ಥಾಪಿಸುವ ಕುರಿತಂತೆ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಮತದಾರರ ಪಟ್ಟಿಯಲ್ಲಿ ಹೊಸದಾಗಿ ಹೆಸರು ಸೇರ್ಪಡೆ ಮಾಡಲು ಮತ್ತು ಬದಲಾವಣೆ ಮಾಡಲು ಇನ್ನೂ ಅವಕಾಶವಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತೆ ತಿಳಿಸಿದ ಜಿಲ್ಲಾಧಿಕಾರಿ, ಈ ಬಾರಿಯ ಚುನಾವಣೆಯಲ್ಲಿ ವಿಕಲಚೇತನರು, ಗರ್ಭಿಣಿಯರು ಮತ್ತು ರೋಗಿಗಳಿಗೆ ಮತದಾನ ಮಾಡಲು ವಿಶೇಷ ಸೌಲಭ್ಯ ಕಲ್ಪಿಸಲಾಗಿದ್ದು, ಅವರಿಗೆ ಪ್ರತ್ಯೇಕ ಪಾಸ್ ನೀಡಲಾಗುವುದು, ಮತಗಟ್ಟೆಯಲ್ಲಿ ಅವರಿಗೆ ಆದ್ಯತೆಯ ಮೇಲೆ ಮತ ಚಲಾಯಿಸಲು ಅವಕಾಶ ನೀಡಲಾಗುವುದು, ಅಗತ್ಯವಿರುವೆಡೆಗಳಲ್ಲಿ ವೀಲ್ ಚೇರ್ ಮತ್ತು ರ್ಯಾಂಪ್ ಸೌಲಭ್ಯ ಒದಗಿಸಲು ಈಗಾಗಲೇ ಕ್ರಮ ಕೈಗೊಂಡಿದ್ದು, 8054 ಮಂದಿ ವಿಕಲಚೇತನ ಮತದಾರರನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.

ಈ ಬಾರಿಯ ಚುನಾವಣೆಯಲ್ಲಿ ವಿವಿ ಪ್ಯಾಟ್ ಯಂತ್ರ ಅಳವಡಿಸಲಾಗಿದ್ದು, ಇದರಿಂದ ತಾವು ಯಾರಿಗೆ ಮತದಾನ ಮಾಡಿದ್ದೇವೆ ಎಂಬ ಖಾತರಿ ಪ್ರತಿಯೊಬ್ಬ ಮತದಾರರಿಗೆ ಸಿಗಲಿದೆ, ವಿವಿ ಪ್ಯಾಟ್ ಮತಯಂತ್ರಗಳ ಪ್ರಾತ್ಯಕ್ಷಿಕೆ ಸಾರ್ವಜನಿಕರಿಗೆ ನೀಡಲು ಕ್ರಮ ಕೈಗೊಂಡಿದ್ದು, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರ ಕೋರಿಕೆ ಮೇರೆಗೆ , ಅವರಿಗೆ ಅನುಕೂಲವಾದ ಸಮಯದಲ್ಲಿ ಸ್ಥಳಕ್ಕೆ ಆಗಮಿಸಿ ಪ್ರಾತ್ಯಕ್ಷಿಕೆ ನೀಡಲಾಗುವುದು ಎಂದು ಡಿಸಿ ಹೇಳಿದರು.

ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಒಂದು ಮಹಿಳಾ ಮತಗಟ್ಟೆ ಸ್ಥಾಪಿಸಲು ಚುನಾವಣಾ ಆಯೋಗ ಸೂಚಿಸಿದ್ದು, ಈ ಮತಗಟ್ಟೆಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಸಹಾ ಮಹಿಳೆಯರೇ ಆಗಿರುತ್ತಾರೆ ಎಂದು ಡಿಸಿ ತಿಳಿಸಿದರು.

ಚುನಾವಣಾ ಮಾದರಿ ನೀತಿ ಸಂಹಿತೆಯಂತೆ, ಖಾಸಗಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿನ ಕಟೌಟ್ ಗಳು , ಬ್ಯಾನರ್ ಗಳನ್ನು, ಸರ್ಕಾರಿ ಕಾರ್ಯಕ್ರಮಗಳ ಜಾಹೀರಾತು ಬೋರ್ಡ್‍ಗಳನ್ನು 24ಗಂಟೆಗಳ ಒಳಗೆ ತೆರವುಗೊಳಿಸಬೇಕು, ಯಾವುದೇ ಚುನಾವಣಾ ಪ್ರಚಾರಕ್ಕೆ ಸಂಬಂದಿಸಿದಂತೆ ಸಭೆ ಸಮಾರಂಭಗಳಿಗೆ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ, ಪೊಲೀಸ್ ಇಲಾಖೆಯಿಂದ ಮೈಕ್ ಅನುಮತಿ ಪಡೆಯಬೆಕು, ಪ್ರಚಾರದ ಸಮಯದ ಬೆಳಗ್ಗೆ 6 ರಿಂದ ರಾತ್ರಿ 10 ರ ವರೆಗೆ ಮಾತ್ರ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಚುನಾವಣಾ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ನಡೆಸಲು, ವಿಡಿಯೋ ಸರ್ವೇಲೈನ್ ರೂಂ, ಪ್ಲೈಯಿಂಗ್ ಸ್ಕ್ವಾಡ್, ವಿಡಿಯೋ ವ್ಯೂ ರೂಂ, ಲೆಕ್ಕಪತ್ರ ತಪಾಸಣಾ ತಂಡ, ಅಂಕಿ ಅಂಶ ಸಂಗ್ರಹಣ ತಂಡ, ಸೆಕ್ಟರ್ ಅಧಿಕಾರಿ, ಎಂಸಿಎಂಸಿ ತಂಡಗಳನ್ನು ಈಗಾಗಲೇ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಚುನಾವಣಾ ಸಂಬಂದಿತ ದೂರುಗಳನ್ನು ಸ್ವೀಕರಿಸಿಲು, ಜಿಲ್ಲಾಧಿಕಾರಿ ಕಚೇರಿಯಲ್ಲಿ , ದೂರು ನಿರ್ವಹಣಾ ಕೋಶ ತೆರೆಯಲಾಗಿದ್ದು, ಟೋಲ್ ಪ್ರೀ ಸಂಖ್ಯೆ 1077 ಹಾಗೂ ದೂ.ಸಂ.0820-2574920, 2574991 ಗೆ ಸಾರ್ವಜನಿಕರು ದೂರು ನೀಡಬಹುದು ಎಂದು ಜಿಲ್ಲಾಧಿಕಾರಿ ಹೇಳಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *