Connect with us

KARNATAKA

ಆಪ್ತರ ಜೊತೆ ಸಿಎಂ ರಹಸ್ಯ ಸಭೆ ; ನಾಯಕತ್ವ ಬದಲಿ ವದಂತಿಗೆ ಪ್ರತಿತಂತ್ರ

ಬೆಂಗಳೂರು, ಆಗಸ್ಟ್ 2: ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ಕುರಿತಾಗಿ ಎದ್ದಿರುವ ವದಂತಿಗಳ ನಡುವೆಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜುಲೈ 31ರಂದು ರಾತ್ರಿ ಆಪ್ತ ಶಾಸಕರೊಂದಿಗೆ ದಿಢೀರ್ ಸಭೆ ನಡೆಸಿದ್ದಾರೆ. ಗೃಹ ಕಚೇರಿ ಕಾವೇರಿಯಲ್ಲಿ ನಡೆದ ಈ ಸಭೆಯಲ್ಲಿ ಸಿಎಂ ಆಪ್ತ ಸಚಿವರಾದ ಬಸವರಾಜ್ ಬೊಮ್ಮಾಯಿ, ಆರ್.ಅಶೋಕ್, ವಿ.ಸೋಮಣ್ಣ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಶಾಸಕರಾದ ಹರೀಶ್ ಪೂಂಜಾ, ಬೆಳ್ಳಿ ಪ್ರಕಾಶ್, ಅಪ್ಪಚ್ಚು ರಂಜನ್ ಸೇರಿದಂತೆ 16ಕ್ಕೂ ಹೆಚ್ಚು ಶಾಸಕರು ಮತ್ತು ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಪಾಲ್ಗೊಂಡಿದ್ದರು.

ನಾಯಕತ್ವ ಬದಲಾವಣೆಯ ಚರ್ಚೆ ನಡೆದಿರುವಾಗಲೇ ಒಂದು ಗಂಟೆಗೂ ಹೆಚ್ಚು ಕಾಲ ಸಿಎಂ ಯಡಿಯೂರಪ್ಪ ರಹಸ್ಯವಾಗಿ ಸಭೆ ನಡೆಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ತಮ್ಮ ನಾಯಕತ್ವ ಬದಲಾಯಿಸಲು ವರಿಷ್ಠರು ನಿರ್ಧರಿಸಿದರೆ ಅದಕ್ಕೆ ಪ್ರತಿತಂತ್ರ ಹೆಣೆಯುವುದಕ್ಕಾಗಿಯೇ ಈ ಸಭೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಸಭೆಯ ಮಧ್ಯೆ ಸ್ವತಃ ಸಿಎಂ ಬಿಎಸ್ವೈ ಅವರೇ ಕೆಲವು ಶಾಸಕರಿಗೆ ಖುದ್ದಾಗಿ ಕರೆ ಮಾಡಿ ಬೆಂಬಲ ಗಿಟ್ಟಿಸುವ ಪ್ರಯತ್ನ ಮಾಡಿದ್ದಾರೆ. ಪ್ರಮುಖವಾಗಿ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಬಳ್ಳಾರಿ, ಕೊಪ್ಪಳ, ಬಾಗಲಕೋಟೆ, ಹುಬ್ಬಳ್ಳಿ ಧಾರವಾಡ ಹೀಗೆ ಹಲವು ಜಿಲ್ಲೆಗಳ ಶಾಸಕರ ಜೊತೆ ಮಾತನಾಡಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ನಡೆದಿರುವ ಕಹಿ ಘಟನೆಗಳನ್ನು ಮರೆತು ಯಾವುದೇ ಅಸಮಾಧಾನ ಇದ್ದರೂ ತಮ್ಮನ್ನು ಸಂಪರ್ಕಿಸುವಂತೆ ಕಿವಿಮಾತು ಹೇಳಿದ್ದಾರೆ.

ADVERTISEMENT

ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಪ್ರವಾಹ, ಸಂಪುಟ ವಿಸ್ತರಣೆ, ಉಚ ಚುನಾವಣೆ, ಕಾಂಗ್ರೆಸ್- ಜೆಡಿಎಸ್ ನಿಂದ ಬಂದವರಿಗೆ ಅಧಿಕಾರ ಹಂಚಿಕೆ, ಕೋವಿಡ್ ನಿಯಂತ್ರಣ ಹೀಗೆ ಹಲವು ಬಿಕ್ಕಟ್ಟುಗಳ ನಡುವೆ ಮೂಲ ಬಿಜೆಪಿ ಶಾಸಕರ ಬಗ್ಗೆ ಗಮನ ಕೊಡಲು ಸಾಧ್ಯವಾಗಿಲ್ಲ. ಮುಂದೆ ಅಂತಹ ಪ್ರಮಾದ ಆಗದಂತೆ ನೋಡಿಕೊಳ್ಳಲಾಗುವುದು. ಕ್ಷೇತ್ರದ ಕಾರ್ಯಗಳ ಬಗ್ಗೆ ಯಾವುದೇ ಕೆಲಸಗಳಿದ್ದರೂ ತಮ್ಮನ್ನು ಸಂಪರ್ಕಿಸುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ನಾಯಕತ್ವ ಬದಲಾವಣೆಯ ಬಗ್ಗೆ ಕೂಗು ಕೇಳಿಬಂದರೆ, ತಮ್ಮ ಜೊತೆ ದೊಡ್ಡ ಸಂಖ್ಯೆಯಲ್ಲಿ ಶಾಸಕರಿದ್ದಾರೆ ಅನ್ನುವುದನ್ನು ವರಿಷ್ಠರ ಮುಂದೆ ತೋರಿಸಿಕೊಳ್ಳಲು ಈ ಸಭೆ ನಡೆಸಿದ್ದಾರೆ ಎಂದು ಸಿಎಂ ಆಪ್ತರ ಮೂಲಗಳಿಂದ ತಿಳಿದುಬಂದಿದೆ.

ನಾಲ್ಕು ದಿನಗಳ ಹಿಂದೆ ಡಿಸಿಎಂ ಲಕ್ಷ್ಮಣ ಸವದಿ ದೆಹಲಿ ನಾಯಕರನ್ನು ಭೇಟಿ ಮಾಡಿದ್ದು, ರಾಜ್ಯ ಸರಕಾರಕ್ಕೆ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಡಿಸಿಎಂ ಅಂತರ ಕಾಯ್ದುಕೊಂಡಿದ್ದು, ಇದೇ ಸಂದರ್ಭದಲ್ಲಿ ನಾಯಕತ್ವ ಬದಲಾವಣೆಯ ವಿಚಾರ ಮುನ್ನೆಲೆಗೆ ಬಂದಿದ್ದು ಚರ್ಚೆಗೆ ಕಾರಣವಾಗಿತ್ತು. ಲಕ್ಷ್ಮಣ ಸವದಿ ಮುಂದಿನ ಮುಖ್ಯಮಂತ್ರಿ ಎಂದು ಅವರ ಹಿಂಬಾಲಕರು ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದೂ ಆಗಿತ್ತು. ಇಂಥ ಸುದ್ದಿಗಳಿಂದ ವಿಚಲಿತರಾಗಿರುವ ಯಡಿಯೂರಪ್ಪ ಅದೇ ಕಾರಣಕ್ಕೆ ಪರ್ಯಾಯ ತಯಾರಿಯನ್ನೂ ಮಾಡಿಕೊಂಡಿರುವುದು ಸ್ಪಷ್ಟ.

ಹಾಗೆಂದು ಯಡಿಯೂರಪ್ಪ ವಿರೋಧಿ ಬಣದ ನಾಯಕ ಬಿ.ಎಲ್.ಸಂತೋಷ್ ಆಪ್ತನಾಗಿರುವ ಲಕ್ಷ್ಮಣ ಸವದಿಯ ಚಟುವಟಿಕೆ ಬಗ್ಗೆ ನಿರ್ಲಕ್ಷ್ಯ ವಹಿಸುವಂತೆಯೂ ಇಲ್ಲ. ಈ ಹಿಂದೆ ಶಾಸಕರೇ ಅಲ್ಲದ ಸವದಿಯನ್ನು ಡಿಸಿಎಂ ಪದವಿಗೇರಿಸಿದ್ದೂ ಸಂತೋಷ್ ಬಣ. ಉತ್ತರ ಕರ್ನಾಟಕದಲ್ಲಿ ಯಡಿಯೂರಪ್ಪ ಪರ್ಯಾಯವಾಗಿ ಮತ್ತೊಬ್ಬ ಲಿಂಗಾಯತ ನಾಯಕನನ್ನು ಬೆಳೆಸಬೇಕೆಂದು ಡಿಸಿಎಂ ಹುದ್ದೆ ನೀಡಲಾಗಿತ್ತು. ಆದರೆ, ಲಕ್ಷ್ಮಣ ಸವದಿ ನಾಯಕತ್ವದ ಬಗ್ಗೆ ಬಹುತೇಕ ಶಾಸಕರು ಅಸಮ್ಮತಿ ಹೊಂದಿದ್ದಾರೆ. ಇಂಥ ಸಂದರ್ಭದಲ್ಲಿ ಲಿಂಗಾಯತ ಸಮುದಾಯದ ಅನಭಿಷಿಕ್ತ ದೊರೆ ಎಂದೇ ಪರಿಗಣಿಸಲ್ಪಟ್ಟಿರುವ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವುದು ಸುಲಭ ವಿಚಾರವಲ್ಲ. ಅಲ್ಲದೆ, ಅಂಥ ಪ್ರಯತ್ನಕ್ಕೆ ಹೈಕಮಾಂಡ್ ಮೂಲಕ ಕೈಹಾಕಿದರೂ ಪರ್ಯಾಯ ನಾಯಕ ಯಾರೆಂಬ ಪ್ರಶ್ನೆಗೂ ಉತ್ತರವಿಲ್ಲ. ಇದೇನಿದ್ದರೂ, ಕೋವಿಡ್ ನಿರ್ವಹಣೆ ವೈಫಲ್ಯ, ವಯಸ್ಸಿನ ಕಾರಣದಿಂದ ಯಡಿಯೂರಪ್ಪ ಅವರನ್ನು ಬದಲಿಸಬೇಕೆಂಬ ಒತ್ತಡ ಹೈಕಮಾಂಡ್ ಮಟ್ಟದಲ್ಲಿ ನಡೆದಿರುವುದಂತೂ ಸತ್ಯ.

Facebook Comments

comments