LATEST NEWS
ಖಾಸಗಿ ಬಸ್ ಗಳಲ್ಲಿ ಕನ್ನಡ ಬೋರ್ಡ್ – ಯಾವುದೇ ರಶೀದಿ ನೀಡದೆ ಹಣ ಲೂಟಿ ಎಂದ ಸಂಘಟನೆಗಳು
ಮಂಗಳೂರು ಡಿಸೆಂಬರ್ 06: ಮಂಗಳೂರಿನಲ್ಲಿ ಓಡಾಡುವ ಖಾಸಗಿ ಸಿಟಿ ಬಸ್ ಮತ್ತು ಸರ್ವೀಸ್ ಬಸ್ ಗಳಿಗೆ ಕನ್ನಡಪರ ಸಂಘಟನೆ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ಸೇರಿ ಕನ್ನಡ ಬೋರ್ಡ್ ಅಳವಡಿಸುವ ಅಭಿಯಾನ ಆರಂಭಗೊಂಡಿದೆ. ಕನ್ನಡ ಬೋರ್ಡ್ ಅಳವಡಿಸಲು ಕೆಲವು ಕನ್ನಡಪರ ಸಂಘಟನೆಗಳು ಮತ್ತು ಆರ್.ಟಿ.ಒ ಅಧಿಕಾರಿಗಳು ಬಸ್ ಸಿಬ್ಬಂದಿಗಳಿಂದ ಯಾವುದೇ ರಶೀದಿ ನೀಡದೆ ಹಣ ದೋಚಲಾಗುತ್ತಿದೆ ಎನ್ನುವ ಆರೋಪವೂ ಈ ನಡುವೆ ಕೇಳಿ ಬಂದಿದೆ. ದೇಶದ ಎಲ್ಲಾ ಭಾಗದ ಜನ ಇರುವ ಮಂಗಳೂರಿನಲ್ಲಿ ಕನ್ನಡ ಬೋರ್ಡ್ ಅಳವಡಿಸುವುದರಿಂದ ಬೇರೆ ಭಾಷೆ ಮಾತನಾಡುವ ಮಂದಿಗೆ ಇದರಿಂದ ತೊಂದರೆಯಾಗಲಿದೆ ಎನ್ನುವ ಅಭಿಪ್ರಾಯವೂ ಕೇಳಿಬರಲಾರಂಭಿಸಿದೆ. ಅಧಿಕಾರಿಗಳು ಒತ್ತಾಯಪೂರ್ವಕವಾಗಿ ಈ ರೀತಿಯ ಕನ್ನಡ ಬೋರ್ಡ್ ಅಳವಡಿಸುವ ಪ್ರಕ್ರಿಯೆ ನಡೆಸಿದರೆ ಇದನ್ನು ತಡೆಯುವ ಎಚ್ಚರಿಕೆಯನ್ನು ಇದೀಗ ತುಳುಪರ ಸಂಘಟನೆಗಳು ನೀಡಿದೆ.
ಕೆಲವು ಕನ್ನಡಪರ ಸಂಘಟನೆಗಳು ಮತ್ತು ಆರ್‌ಟಿ.ಒ ಕಛೇರಿ ಅಧಿಕಾರಿಗಳು ಮಂಗಳೂರಿನಲ್ಲಿ ಹಮ್ಮಿಕೊಂಡ ಬಸ್ ಗಳಿಗೆ ಕನ್ನಡ ಬೋರ್ಡ್ ಅಳವಡಿಸುವ ಅಭಿಯಾನಕ್ಕೆ ಭಾರೀ ವಿರೋಧ ಕೇಳಿ ಬಂದಿದೆ. ಒಂದೊಂದು ಬೋರ್ಡ್ ಗೆ 300 ರೂಪಾಯಿಗಳನ್ನು ಪಡೆಯುತ್ತಿರುವ ಈ ಅಧಿಕಾರಿಗಳು ಪಡೆದ ಹಣಕ್ಕೆ ಯಾವುದೇ ರೀತಿಯ ರಶೀದಿಯನ್ನು ನೀಡುತ್ತಿಲ್ಲ ಎನ್ನುವ ಆರೋಪವೂ ಇದೆ. ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಸಂಚರಿಸುವ ಸಿಟಿ ಮತ್ತು ಸರ್ವೀಸ್ ಬಸ್ ಗಳಿಗೆ ಈ ಕನ್ನಡ ಬೋರ್ಡ್ ಗಳನ್ನು ಸಂಘಟನೆಗಳು ಆರ್.ಟಿ.ಒ ಅಧಿಕಾರಿಗಳನ್ನು ಮುಂದಿಟ್ಟುಕೊಂಡು ಅಭಿಯಾನ ಪ್ರಾರಂಭಿಸಿದೆ. ಆದರೆ ಇದಕ್ಕೆ ಬಸ್ ಮಾಲಕರು ಸೇರಿದಂತೆ ಸಾರ್ವಜನಿಕರ ವಿರೋಧ ಆರಂಭಗೊಂಡಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪ್ರಾದೇಶಿಕ ಭಾಷೆಯಾಗಿ ತುಳು ಗುರುತಿಸಿಕೊಂಡಿದ್ದು, ಈ ಭಾಗದ ತುಳುವನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ. ಅಲ್ಲದೆ ಮಂಗಳೂರಿನಲ್ಲಿ ದೇಶದ ವಿವಿಧ ರಾಜ್ಯಗಳಿಗೆ ಸೇರಿದ ಜನ ಉದ್ಯೋಗವನ್ನು ತಮ್ಮ ವ್ಯವಹಾರಗಳನ್ನು ಮಾಡುತ್ತಿದ್ದು, ಬಸ್ ಗಳ ಬೋರ್ಡ್ ಗಳನ್ನು ಬದಲಿಸುವುದರಿಂದ ಬೇರೆ ರಾಜ್ಯಗಳ ಜನರಿಗೂ ಸಮಸ್ಯೆಯಾಗುತ್ತದೆ. ಕನ್ನಡದ ಬಗ್ಗೆ ಮಾತನಾಡುವ ಕನ್ನಡಪರ ಸಂಘಟನೆಯ ಜನ ಮೊದಲು ಪ್ರಾದೇಶಿಕ ಭಾಷೆಯಾದ ತುಳುವಿಗೆ ತಮ್ಮ ಕೊಡುಗೆ ಏನು ಅನ್ನೋದನ್ನ ಜನತೆಗೆ ತಿಳಿಸಬೇಕು ಎನ್ನುವ ಒತ್ತಾಯವೂ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಕನ್ನಡ ಬೋರ್ಡ್ ಅಳವಡಿಸಿ ಕನ್ನಡವನ್ನು ಉಳಿಸುವ ಪ್ರಯತ್ನ ನಡೆಯುತ್ತಿದೆ. ಕನ್ನಡ ಬೋರ್ಡ್ ಗಳನ್ನು ಅಳವಡಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಈ ಅಭಿಯಾನಕ್ಕೆ ಆರ್‌ಟಿಒ ಅಧಿಕಾರಿಗಳೂ ಸಾಥ್ ನೀಡಿದ್ದಾರೆ. ಈ ಅಭಿಯಾನವನ್ನು ಡಿಸೆಂಬರ್ 10 ರಿಂದ ಮತ್ತೆ ಆರಂಭಿಸಲು ಕನ್ನಡಪರ ಸಂಘಟನೆಗಳು ಸಿದ್ಧತೆಯನ್ನು ನಡೆಸಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಜಿ.ಕೆ.ಭಟ್ ಮಾಹಿತಿ ನೀಡಿದ್ದಾರೆ. ಎಲ್ಲಾ ಭಾಷೆಗಳ ಸಂಗಮವಾಗಿರುವ ಮಂಗಳೂರಿನಲ್ಲಿ ಕನ್ನಡದ ಹೇರಿಕೆಗೆ ಭಾರೀ ವಿರೋಧವೂ ವ್ಯಕ್ತವಾಗುತ್ತಿದೆ. ತುಳುಪರ ಸಂಘಟನೆಗಳು ಇದೀಗ ಕನ್ನಡ ಬೋರ್ಡ್ ಅಭಿಯಾನದ ವಿರುದ್ಧ ತಿರುಗಿಬಿದ್ದಿದ್ದು ,ಒತ್ತಾಯಪೂರ್ವಕ ಕನ್ನಡ ಹೇರಿಕೆಯ ವಿರುದ್ಧ ಹೋರಾಟದ ಎಚ್ಚರಿಕೆಯನ್ನು ನೀಡಿದೆ.