LATEST NEWS
ಬೆಕ್ಕು ಮಾಡಿದ ಕಿತಾಪತಿ – ಪೊಲೀಸ್ ಕ್ಷಿಪ್ರ ಕಾರ್ಯಾಚರಣೆಯಲ್ಲಿ ತಪ್ಪಿದ ದೊಡ್ಡ ಕೋಮುಗಲಭೆ

ಹೈದರಾಬಾದ್ ಫೆಬ್ರವರಿ 13: ಬೆಕ್ಕೊಂದು ಮಾಡಿದ ಕಿತಾಪತಿಗೆ ಕೋಮುಗಲಭೆ ಆಗುವ ಹಂತಕ್ಕೆ ತಲುಪಿದ್ದ ಪರಿಸ್ಥಿತಿಯನ್ನು ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಸಹಜ ಸ್ಥಿತಿಗೆ ತಂದಿದ್ದಾರೆ.
ಹೈದರಾಬಾದ್ನ ತಪ್ಪಚಬುತ್ರದ ಹನುಮಾನ್ ದೇವಸ್ಥಾನದ ಆವರಣದಲ್ಲಿನ ಶಿವ ದೇವಾಲಯದಲ್ಲಿ ಮಾಂಸದ ತುಂಡು ಪತ್ತೆಯಾಗಿದ್ದು, ಇದು ಬುಧವಾರ ಉದ್ವಿಗ್ನತೆಗೆ ಕಾರಣವಾಗಿತ್ತು, ದೇವಸ್ಥಾನದಲ್ಲಿ ಯಾರೋ ಕಿಡಿಗೇಡಿಗಳು ಮಾಂಸ ಎಸೆದಿದ್ದಾರೆ ಎಂದು ಆರೋಪಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ಮತ್ತು ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕಾರ್ಯಾಚರಣೆ ಗೆ ಇಳಿದ ಪೊಲೀಸರು ಮಾತ್ರ ಶಾಕ್ ಆಗಿದ್ದರು. ದೇವಸ್ಥಾನದ ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲನೆ ವೇಳೆ ಬೆಕ್ಕೊಂದು ಮಾಂಸದ ತುಂಡನ್ನು ಬಾಯಲ್ಲಿ ಕಚ್ಚಿಕೊಂಡು ದೇವಸ್ಥಾನದ ಒಳಗೆ ನುಗ್ಗಿದ್ದು ಕಂಡು ಬಂದಿದೆ. ಕೂಡಲೇ ಪೊಲೀಸರು ಮಾಹಿತಿಯನ್ನು ದೇವಸ್ಥಾನದ ಆಡಳಿತ ಮಂಡಳಿಗೆ ತಿಳಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಒಟ್ಟಾರೆ ಬೆಕ್ಕು ಮಾಡಿದ ಕಿತಾಪತಿಗೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು, ಆದರೆ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಲ್ಲಿ ನಿಜಾಂಶ ತಿಳಿದು ಪರಿಸ್ಥಿತಿ ತಿಳಿಯಾಗಿದೆ.