FILM
ಕನ್ನಡ ಗೊತ್ತಿಲ್ವ ಅಂತ ಕೇಳಿದ ವಿಮಾನ ನಿಲ್ದಾಣದ ಅಧಿಕಾರಿ ವಿರುದ್ದ ಬಾಲಿವುಡ್ ಡ್ಯಾನ್ಸರ್ ಸಲ್ಮಾನ್ ಯೂಸೂಫ್ ಖಾನ್ ಆಕ್ರೋಶ
ಬೆಂಗಳೂರು ಮಾರ್ಚ್ 16: ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕನ್ನಡದಲ್ಲಿ ಮಾತನಾಡಿದ ಅಧಿಕಾರಿಯೊಬ್ಬರ ವಿರುದ್ದ ಬಾಲಿವುಡ್ ನಟ ಹಾಗೂ ನೃತ್ಯ ಸಂಯೋಜಕ ಸಲ್ಮಾನ್ ಯೂಸೂಫ್ ಖಾನ್ ನಿಂದಿಸಿದ್ದಾರೆ.
ದುಬೈಗೆ ತೆರಳಲು ಮಂಗಳವಾರ ತಡರಾತ್ರಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಸಲ್ಮಾನ್ ಭದ್ರತಾ ತಪಾಸಣೆ ಮಾಡಿಸುತ್ತಿದ್ದಾಗ ಅವರ ಪಾಸ್‌ಪೋರ್ಟ್ ನೋಡಿದ ಅಧಿಕಾರಿ ಬೆಂಗಳೂರಿನವರೇ ಆದ ಸಲ್ಮಾನ್ ಜೊತೆ ಕನ್ನಡದಲ್ಲಿ ಮಾತನಾಡಿದ್ದಾರೆ. ಆಗ ನಟ ‘ನನಗೆ ಕನ್ನಡ ಬರುವುದಿಲ್ಲ’ ಎಂದು ಹೇಳಿದ್ದಾರೆ. ‘ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಲ್ಲಿದ್ದ ಅಧಿಕಾರಿಯೊಬ್ಬರು ಕನ್ನಡದಲ್ಲಿ ಮಾತನಾಡುವಂತೆ ನನಗೆ ಒತ್ತಾಯಿಸಿದ್ದಾರೆ. ಈ ಅಧಿಕಾರಿ ಅನಕ್ಷರಸ್ಥ ಪಶು. ಇಂಥ ಅನಕ್ಷರಸ್ಥರಿಂದಲೇ ದೇಶ ಅಭಿವೃದ್ಧಿ ಆಗುತ್ತಿಲ್ಲ’ ಎಂದು ನಿಂದಿಸಿದ ವಿಡಿಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
‘ನೀವು ಹುಟ್ಟಿರುವುದು ಬೆಂಗಳೂರಿನಲ್ಲಿ. ನಿಮ್ಮ ತಂದೆ ಹುಟ್ಟಿರುವುದು ಬೆಂಗಳೂರಿನಲ್ಲಿ. ಆದರೂ, ನಿಮಗೆ ಕನ್ನಡ ಬರುವುದಿಲ್ಲ ಎಂದರೆ ಹೇಗೆ’ ಎಂದು ಅಧಿಕಾರಿ ಪ್ರಶ್ನಿಸಿದ್ದಾರೆ. ಇದಕ್ಕೆ ಸಲ್ಮಾನ್, ‘ನಾನು ಸೌದಿ ಹುಡುಗ. ನಾನು ಹುಟ್ಟಿದ್ದು ಬೆಂಗಳೂರಿನಲ್ಲಾದರೂ ಶಾಲೆ ಕಲಿತಿದ್ದು ಸೌದಿನಲ್ಲಿ. ಹಾಗಾಗಿ, ನಾನು ಕನ್ನಡ ಕಲಿತಿಲ್ಲ’ ಎಂದಿದ್ದಾರೆ. ಆಗ ಆ ಅಧಿಕಾರಿಯು ‘ನಿಮಗೆ ಕನ್ನಡ ಬರುವುದಿಲ್ಲ ಎಂದರೆ ನನಗೆ ಅನುಮಾನ ಬರುತ್ತಿದೆ’ ಎಂದಿದ್ದಾರೆ. ಇದಕ್ಕೆ ಸಿಟ್ಟಾದ ಸಲ್ಮಾನ್, ‘ನನ್ನನ್ನು ಅನುಮಾನಿಸುತ್ತಿದ್ದೀರಾ. ಏಕೆ ಅನುಮಾನಿಸುತ್ತಿದ್ದೀರಿ’ ಎಂದು ಜೋರು ಧ್ವನಿಯಲ್ಲಿ ಮಾತನಾಡಿದ್ದಾರೆ. ಆಗ ಅಧಿಕಾರಿ ಸುಮ್ಮನಾದರಂತೆ. ಹೀಗೆಂದು ಸಲ್ಮಾನ್ ವಿಡಿಯೊದಲ್ಲಿ ಹೇಳಿದ್ದಾರೆ.