KARNATAKA
ಚಿತ್ರದುರ್ಗ : ನಕಲಿ AK 47 ಗನ್ ಹಿಡಿದು ಸಾರ್ವಜನಿಕರಲ್ಲಿ ಭಯ, ರೀಲ್ಸ್ ಶೋಕಿಲಾಲನನ್ನು ಕಂಬಿ ಹಿಂದೆ ತಳ್ಳಿದ ಖಾಕಿ ಪಡೆ..!

ಚಿತ್ರದುರ್ಗ: ಸಾರ್ವಜನಿಕ ಸ್ಥಳದಲ್ಲಿ ನಕಲಿ Ak 47 ಗನ್ ಹಿಡಿದು ಜನರಲ್ಲಿ ಭಯ ಭೀತಿ ಸೃಷ್ಟಿಸಿದ ಆರೋಪದಡಿ ರೀಲ್ಸ್ ಶೋಕಿಲಾಲನನ್ನು ಬೆಂಗಳೂರಿನ ಕೊತ್ತನೂರು ಠಾಣೆ ಪೊಲೀಸರು ಅರೆಸ್ಟ್ ಮಾಡಿ ಕಂಬಿ ಹಿಂದೆ ತಳ್ಳಿದ್ದಾರೆ.
ಜೆ.ಪಿ.ನಗರ ನಿವಾಸಿ ಅರುಣ್ ಕಠಾರೆ (26) ಬಂಧಿತ ಆರೋಪಿಯಾಗಿದ್ದಾನೆ. ಎಕೆ 47 ಗನ್ ಹಿಡಿದ ಬಾಡಿ ಗಾರ್ಡಗಳ ಜತೆಗೆ ಚೊಕ್ಕನಹಳ್ಳಿಯ ಭಾರತೀಯ ಸಿಟಿಯ ಲೀಲಾ ಹೋಟೆಲ್ ಬಳಿ ಬಂದಿದ್ದು, ಕೆಲವರಿಗೆ ಗನ್ ತೋರಿಸಿ ಹೆದರಿಸಿ ಕಾರಿನಲ್ಲಿ ಕೂರಿಸಿಕೊಂಡು ತೆರಳಿದ್ದ. ಈ ಘಟನೆಯಿಂದ ಸಾರ್ವಜನಿಕರು ಆತಂಕಗೊಂಡು ಗಸ್ತು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಂತೆಯೇ ಆರೋಪಿಯು ಗನ್ ಹಿಡಿದ ಬಾಡಿ ಗಾರ್ಡ್‌ಗಳ ಜತೆಗೆ ಕಾರಿನಲ್ಲಿ ತೆರಳುವ ಇನ್‌ಸ್ಟಾಗ್ರಾಮ್ ವಿಡಿಯೋ ತೋರಿಸಿದ್ದರು. ಈ ಮಾಹಿತಿ ಮೇರೆಗೆ ಕೊತ್ತನೂರು ಪೊಲೀಸರು ಶಸ್ತ್ರಾಸ್ತ್ರಕಾಯ್ದೆ ಮತ್ತು ಸಾರ್ವಜನಿಕ ಸ್ಥಳದಲ್ಲಿ ತೊಂದರೆ ನೀಡಿದ ಭಯಪಡಿಸಿದ ಆರೋಪದಡಿ ಪ್ರಕರಣ ದಾಖಲಿಸಿ ಆರೋಪಿ ಅರುಣ್ ಕಠಾರೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ’

ಚಿತ್ರದುರ್ಗ ಮೂಲದ ಅರುಣ್ ಕಠಾರೆ ರೀಲ್ಸ್ ಶೋಕಿಲಾಲ. ಈತ ಮೈ ತುಂಬಾ ನಕಲಿ ಚಿನ್ನಾಭರಣ ತೊಟ್ಟು, ನಕಲಿ ಗನ್ ಹಿಡಿದ ಬಾಡಿ ಗಾರ್ಡ್‌ಗಳು, ಸುಂದರ ಯುವತಿಯರು, ಐಷಾರಾಮಿ ಕಾರುಗಳು, ಬೈಕ್‌ಗಳ ಜತೆಗೆ ಐಷಾರಾಮಿ ಜೀವನ ಪ್ರದರ್ಶಿಸುವ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕುತ್ತಿದ್ದ. ಈತನಿಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹಿಂಬಾಲಕರು ಇದ್ದಾರೆ. ಸದ್ಯ ಬೆಂಗಳೂರಿನ ಜೆ.ಪಿ.ನಗರದಲ್ಲಿ ನೆಲೆಸಿದ್ದ ಈತ ಇದೀಗ ಸಾರ್ವಜನಿಕ ಸ್ಥಳದಲ್ಲಿ ರೀಲ್ಸ್ ಹುಚ್ಚಾಟವಾಡಿ ಜೈಲು ಪಾಲಾಗಿದ್ದಾನೆ.
ಅರುಣ್ ಕಟಾರೆ ರೀಲ್ಸ್ ಶೋಕಿಯಿಂದಾಗಿ ಸ್ಯಾಂಡಲವುಡ್‌ನ ಟೆಕ್ನಿಷಿಯನ್‌ಗೆ ಸಂಕಷ್ಟ ಎದುರಾಗಿದೆ. ಕನ್ನಡದ ಸೂಪರ್ ಹಿಟ್ ಸಿನಿಮಾಗಳಿಗೆ ಡಮ್ಮಿ ಗನ್ ಒದಗಿಸುವ ಟೆಕ್ನಿಷಿಯನ್ ಸಾಹಿಲ್‌ಗೆ ಪೊಲೀಸರು ನೋಟಿಸ್ ಕೊಟ್ಟಿದ್ದಾರೆ. ಹೊಂಬಾಳೆ ಫಿಲ್ಸ್, ಗೀತಾ ಪಿಕ್ಚರ್ಸ್ ನಂತಹ ಬ್ಯಾನರ್‌ಗಳ ಸಿನಿಮಾಗಳಿಗೆ ಸಾಹಿಲ್ ಟೆಕ್ನಿಷಿಯನ್ ಆಗಿದ್ದರು. ಕನ್ನಡದ ಸೂಪರ್ ಹಿಟ್ ಚಿತ್ರಗಳಾದ ಕಬ್ಜ, ಭೈರತಿ ರಣಗಲ್, ಮಪ್ತಿ ಸಿನಿಮಾಗಳಿಗೆ ಟೆಕ್ನಿಷಿಯನ್ ಸಾಹಿಲ್ ಡಮ್ಮಿ ಗನ್ ಒದಗಿಸಿದ್ದರು. ಇದೇ ಸಾಹಿಲ್ ಬಳಿ ಅರುಣ್ ಕಟಾರೆ ಡಮ್ಮಿ ಗನ್ ಬಾಡಿಗೆ ಪಡೆದಿದ್ದರು. ಸಾರ್ವಜನಿಕ ಸ್ಥಳದಲ್ಲಿ ರೀಲ್ಸ್ ಮಾಡಲು ಡಮ್ಮಿ ಗನ್ ಅನ್ನು ಅರುಣ್ ಕಟಾರೆ ಬಳಸಿದ್ದ. ಸದ್ಯ ಕೊತ್ತನೂರು ಠಾಣೆ ಪೊಲೀಸರಿಂದ ಬಂಧಿತನಾಗಿದ್ದ ಅರುಣ್ ಕಾಟೇರ, ಸಾಹಿಲ್ ಬಳಿ ಶಾರ್ಟ್ ಮೂವಿಗೆ ಎಂದು ಡಮ್ಮಿ ಗನ್ ಬಾಡಿಗೆ ತೆಗೆದುಕೊಂಡಿದ್ದ. ಈಗ ಕೊತ್ತನೂರು ಪೊಲೀಸರು ಸಾಹಿಲ್‌ಗೆ ನೊಟೀಸ್ ಜಾರಿ ಮಾಡಿದ್ದಾರೆ.