LATEST NEWS
5 ಲಕ್ಷ ವಂಚನೆ ಪ್ರಕರಣ – ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಚೈತ್ರಾ ವಿಚಾರಣೆ
ಉಡುಪಿ ಅಕ್ಟೋಬರ್ 31: ಬೈಂದೂರಿನ ಉದ್ಯಮಿಗೆ ಬಿಜೆಪಿ ಟಿಕೆಟ್ ಕೋಡಿಸುತ್ತೇನೆ ಎಂದು ಹೇಳಿ ಕೋಟ್ಯಾಂತರ ಹಣ ವಂಚಿಸಿದ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಹಿಂದೂ ಕಾರ್ಯಕರ್ತೆ ಚೈತ್ರಾಳನ್ನು ವಿಚಾರಣೆಗಾಗಿ ಕೋಟ ಪೊಲೀಸರು ಉಡುಪಿಗೆ ಕರೆದುಕೊಂಡು ಬಂದಿದ್ದಾರೆ.
ಚೈತ್ರಾಳ ಆಪ್ತ ಸುಧೀನ್ ಪೂಜಾರಿ ಕೋಟ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ 5 ಲಕ್ಷ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರದಲ್ಲಿರುವ ಚೈತ್ರಾಳನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆಗಾಗಿ ಕರೆದುಕೊಂಡು ಬಂದಿದ್ದಾರೆ.
ಚೈತ್ರಾಳನ್ನು ಬ್ರಹ್ಮಾವರದಲ್ಲಿರುವ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯ ಸಂಚಾರಿಪೀಠದ ಮುಂದೆ ಪೊಲೀಸರು ಹಾಜರುಪಡಿಸಿ ಎರಡು ದಿನ ಚೈತ್ರಾಳ ಪೊಲೀಸ್ ಕಸ್ಟಡಿಗೆ ಕೇಳಿದ್ದರು. ಆದರೆ ಒಂದೇ ದಿನದಲ್ಲಿ ವಿಚಾರಣೆ ಪೂರ್ಣಗೊಂಡ ಕಾರಣ ಚೈತ್ರಾಳನ್ನು ಮಂಗಳೂರು ಜೈಲಿಗೆ ಸ್ಥಳಾಂತರಗೊಳಿಸಲಾಗಿದ್ದು, ನಾಳೆ ಬೆಂಗಳೂರು ಪರಪ್ಪನ ಅಗ್ರಹಾರಕ್ಕೆ ರವಾನೆ ಮಾಡುವ ಸಾಧ್ಯತೆ ಇದೆ. ಪೊಲೀಸರ ಜೊತೆ ಬಂದ ಚೈತ್ರಾ ಮಾಧ್ಯಮಗಳ ಕ್ಯಾಮಾರಕ್ಕೆ ಟಾಟಾ ಮಾಡಿದ್ದು, ಬಹಳ ಲವಲವಿಕೆಯಲ್ಲಿ ಇರುವುದು ಕ್ಯಾಮರಾ ಕಣ್ಣಿಗೆ ಬಿದ್ದಿದೆ.