LATEST NEWS
ಭಾರತೀಯ ಸೇನೆಯ ಗಮನ ತಪ್ಪಿಸಲು ಚೀನಾ ಸೇನೆಯ ಕುತಂತ್ರ, ಫಿಂಗರ್ 4 ಗಡಿಯಲ್ಲಿ ಲೌಡ್ ಸ್ಪೀಕರ್ ಮೂಲಕ ಪಂಜಾಬಿ ಹಾಡು ಭಿತ್ತರಿಸುತ್ತಿದೆ ಚೀನಾ…

ಭಾರತೀಯ ಸೇನೆಯ ಗಮನ ತಪ್ಪಿಸಲು ಚೀನಾ ಸೇನೆಯ ಕುತಂತ್ರ, ಫಿಂಗರ್ 4 ಗಡಿಯಲ್ಲಿ ಲೌಡ್ ಸ್ಪೀಕರ್ ಮೂಲಕ ಪಂಜಾಬಿ ಹಾಡು ಭಿತ್ತರಿಸುತ್ತಿದೆ ಚೀನಾ…
ಲಡಾಕ್, ಸೆಪ್ಟಂಬರ್ 17: ಚೀನಾ ಮತ್ತು ಭಾರತ ಗಡಿಯಲ್ಲಿ ದಿನದಿಂದ ದಿನಕ್ಕೆ ಯುದ್ಧದ ಸಾಧ್ಯತೆಗಳು ಹೆಚ್ಚಾಗುತ್ತಿದೆ.
ಚೀನಾ ಸೇನೆ ನಿರಂತರವಾಗಿ ಭಾರತೀಯ ಗಡಿಯನ್ನು ಪ್ರವೇಶಿಸಿ ಭಾರತೀಯ ಭೂ ಪ್ರದೇಶಗಳನ್ನು ಅತಿಕ್ರಮಿಸಲು ನಡೆಸುತ್ತಿರುವ ಪ್ರಯತ್ನಕ್ಕೆ ಭಾರತೀಯ ಸೇನೆ ತಡೆಯೊಡ್ಡುತ್ತಿರುವುದು ಚೀನಾ ಸರಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಅಲ್ಲದೆ ಪೂರ್ವ ಲಡಾಕ್ ನ ಗಡಿಭಾಗವಾದ ಫಿಂಗರ್ 4 ನಲ್ಲಿ ಈಗಾಗಲೇ ಎರಡೂ ಸೇನೆಗಳೂ 100 ರೌಂಡ್ ಪರಸ್ಪರ ಗುಂಡಿನ ದಾಳಿಯನ್ನೂ ನಡೆಸಿದೆ.
ಕಳೆದ 20 ದಿನಗಳಿಂದ ಪೂರ್ವ ಲಡಾಕ್ ನ ಗಡಿ ಭಾಗದಲ್ಲಿ ಭಾರತೀಯ ಹಾಗೂ ಚೀನಾ ಸೇನೆಗಳು ಮೂರು ಬಾರಿ ಈ ರೀತಿ ಗುಂಡಿನ ದಾಳಿಯನ್ನು ನಡೆಸಿದ್ದು, ಪಾಂಗೊಂಗ್ ಲೇಕ್ ಬಳಿಯೂ ಇದೇ ರೀತಿಯ ದಾಳಿಗಳು ನಡೆದಿದೆ.
ಪಾಂಗೊಂಗ್ ಲೇಕ್ ಗಡಿಯಲ್ಲಿ ಚೀನಾ ಸೇನೆ ಭಾರತೀಯ ಭೂ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಿದ ಟೆಂಟ್ ಗಳನ್ನು ತೆರವುಗೊಳಿಸಲು ತೆರಳಿದ ಭಾರತೀಯ ಸೇನೆ ಹಾಗೂ ಚೀನಾ ಸೇನೆ ನಡುವೆ ಈ ಹಿಂದೆ ಘರ್ಷಣೆಯೂ ನಡೆದಿದ್ದು, ಈ ಘರ್ಷಣೆಯಲ್ಲಿ ಭಾರತೀಯ ಸೇನೆಯ 20 ಯೋಧರು ಹುತಾತ್ಮರಾಗಿದ್ದರೆ, ಚೀನಾ ಸೇನೆಗೂ ಭಾರೀ ನಷ್ಟ ಉಂಟಾಗಿತ್ತು.
ಇದೀಗ ಮತ್ತೆ ಎರಡೂ ಸೇನೆಗಳೂ ಪರಸ್ಪರ ಫೈರಿಂಗ್ ರೇಂಜ್ ನಲ್ಲಿ ತಮ್ಮ ಸೇನೆಗಳನ್ನು ನಿಯೋಜಿಸಿದ್ದು, ಯಾವುದೇ ಸಂದರ್ಭದಲ್ಲೂ ದಾಳಿಗಳು ನಡೆಯುವ ಸಾಧ್ಯತೆಯಿದೆ.
ಈ ನಡುವೆ ವಿವಾದಿತ ಪ್ರದೇಶವಾದ ಫಿಂಗರ್ 4 ನಲ್ಲಿ ಚೀನೀ ಸೇನೆಯ ಚಲನವಲನಗಳನ್ನು ನಿರಂತರವಾಗಿ ಗಮನಿಸುತ್ತಿರುವ ಭಾರತೀಯ ಸೇನೆಯ ಗಮನವನ್ನು ಬೇರೆಡೆ ಸೆಳೆಯಲು ಚೀನಾ ಸೇನೆ ಕುತಂತ್ರವೊಂದಕ್ಕೆ ಮುಂದಾಗಿದೆ.
ಫಿಂಗರ್ 4 ನ ಸುತ್ತಾ ಲೌಡ್ ಸ್ಪೀಕರ್ ಗಳನ್ನು ಅಳವಡಿಸಿ ಅದರ ಮೂಲಕ ಚೀನಾ ಸೇನೆ ಪಂಜಾಬಿ ಹಾಡುಗಳನ್ನು ಜೋರಾಗಿ ಭಿತ್ತರಿಸುತ್ತಿದೆ.
ಚೀನಾ ಸೇನೆಯ ಈ ರೀತಿಯ ವರ್ತನೆಯ ಹಿಂದಿನ ಉದ್ದೇಶವೇನು ಎನ್ನುವುದರ ಬಗ್ಗೆ ಇದೀಗ ಹಲವು ಅನುಮಾನಗಳು ಮೂಡಲಾರಂಭಿಸಿದೆ.
ಭಾರತೀಯ ಸೇನೆ ಈ ಭಾಗದಲ್ಲಿ ಹೆಚ್ಚಿನ ಗಸ್ತನ್ನು ಕೈಗೊಂಡಿದ್ದು, ಚೀನಾ ಸೇನೆಯ ಚಲನವಲನಗಳನ್ನು ದಿನದ 24 ಗಂಟೆಯೂ ಗಮನಿಸುತ್ತಿದೆ.
ಇದರಿಂದ ಬೇಸತ್ತ ಚೀನೀ ಸೈನಿಕರು ಈ ರೀತಿಯ ಕುತಂತ್ರದ ಮೂಲಕ ಭಾರತೀಯ ಸೇನೆಯ ಯೋಧರನ್ನು ಗಮನವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನ ನಡೆಸುತ್ತಿದೆ ಎನ್ನಲಾಗುತ್ತಿದೆ.
Continue Reading