KARNATAKA
ಮೂಡಿಗೆರೆಯಲ್ಲಿ ನೈತಿಕ ಪೊಲೀಸ್‌ಗಿರಿ; ಹಿಂದು ಯುವತಿ ಜೊತೆಗಿದ್ದ ಅನ್ಯಕೋಮಿನ ಯುವಕ, ಸ್ನೇಹಿತರಿಗೆ ಹಲ್ಲೆ.!
ಮೂಡಿಗೆರೆ : ನೈತಿಕ ಪೋಲೀಸ್ ಗಿರಿ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಇದೀಗ ಕಾಫಿನಾಡು ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಹಿಂದೂ ಯುವತಿಯೊಂದಿಗೆ ಅನ್ಯಕೋಮಿನ ಯುವಕ ಸ್ನೇಹ ಬೆಳೆಸಿದ್ದ ಎಂದು ಅವನನ್ನು ಮತ್ತು ಅವನ ಸ್ನೇಹಿತರನ್ನು ಯುವಕರು ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ್ದಾರೆ. ಚಿಕ್ಕಮಗಳೂರಿನ ಮೂಡಿಗೇರೆ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಮುನೀರ್, ಸಮೀರ್ ಹಲ್ಲೆಗೊಳಗಾದ ಯುವಕರು. ಹಲ್ಲೆಗೊಳಗಾದ ಇಬ್ಬರು ಯುವಕರನ್ನು ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ವಿಡಿಯೋ ಬಸ್ ನಿಲ್ದಾಣದ ಸಿಸಿಟಿವಿ ಯಲ್ಲಿ ದಾಖಲಾಗಿದೆ. ಇನ್ನು ಹಲ್ಲೆ ಮಾಡಿದ ನಾಲ್ವರನ್ನು ಬಂಧಿಸಲಾಗಿದ್ದು ನಾಲ್ವರು ಹಿಂದು ಸಂಘಟನೆಯೊಂದರಲ್ಲಿ ಗುರುತಿಸಿಕೊಂಡಿದ್ದಾರೆ. ಮೂಡಿಗೆರೆ ಬಸ್ ನಿಲ್ದಾಣಕ್ಕೆ ಕಾರಿನಲ್ಲಿ ಬಂದ ನಾಲ್ವರು ಯುವಕರು ಮುಸ್ಲಿಂ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಸದ್ಯ ಹಲ್ಲೆ ನಡೆಸಿದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. ರಾಜ್ಯದಲ್ಲಿ ನೈತಿಕ ಪೊಲೀಸಗಿರಿ ತಡೆಯಲು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದ್ದರೂ ಪದೇಪದೆ ನೈತಿಕ ಪೊಲೀಸಗಿರಿ ಪ್ರಕರಣಗಳು ಎರಡು ಕೋಮುಗಳಿಂದಲೂ ಮರುಕಳಿಸುತ್ತಲೇ ಇದೆ. ಇದೀಗ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮತ್ತೊಮ್ಮೆ ನೈತಿಕ ಪೊಲೀಸಗಿರಿ ಪ್ರಕರಣ ನಡೆದು ಹೋಗಿದೆ.