Connect with us

LATEST NEWS

ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿಎಸ್‌ಎನ್ಎಲ್ ನಲ್ಲಿ 4ಜಿ ಸೇವೆ

ಉಡುಪಿ ಮಾರ್ಚ್ 28: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೊಬೈಲ್ ನೆಟ್ ವರ್ಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಸಂಸದ ಕೋಟ ಶ್ರೀನಿವಾಸ ಪೂಜಾರಿ ಇದೀಗ ಚಿಕ್ಕಮಗಳೂರು ಜಿಲ್ಲೆಯಲ್ಲಿ 4ಜಿ ಸೇವೆಗೆ ದೂರ ಸಂಪರ್ಕ ಸಚಿವರಾದ ಜ್ಯೋತಿರಾದಿತ್ಯ ಸಿಂಧ್ಯಾ ರಿಗೆ ಮನವಿ ಮಾಡಿದ್ದು, ಕೂಡಲೇ 4ಜಿ ಸೇವೆ ಕಾರ್ಯಾರಂಭಕ್ಕೆ ಬಿಎಸ್ಎನ್ ಎಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.


ಈ ಬಗ್ಗೆ ಮಾಹಿತಿ ನೀಡಿರುವ ಕೋಟ ಶ್ರೀನಿವಾಸ ಪೂಜಾರಿ ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿ.ಎಸ್.ಎನ್.ಎಲ್. ವತಿಯಿಂದ ಕೇವಲ 2ಜಿ ಮತ್ತು 3ಜಿ ಸೇವೆ ಮಾತ್ರ ದೊರೆಯುತ್ತಿದ್ದು, ಗ್ರಾಹಕರು ಸುಮಾರು ವರ್ಷಗಳಿಂದ 4ಜಿ ಸೇವೆಗೆ ಕಾಯುತ್ತಿದ್ದು, ಈ ವಿಷಯವನ್ನು ತಿಳಿಯುತ್ತಲೇ ಕೇಂದ್ರ ಸರ್ಕಾರದ ದೂರ ಸಂಪರ್ಕ ಸಚಿವರಾದ ಜ್ಯೋತಿರಾದಿತ್ಯ ಸಿಂಧ್ಯಾ ಮತ್ತು ಬಿ.ಎಸ್.ಎನ್.ಎಲ್‌ನ ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳಾದ ಬಿ.ಎಸ್.ಎನ್.ಎಲ್ ಚೇರ್‌ಮೆನ್ ಎ.ರಾಬರ್ಟ್ ಜೆ. ರವಿ ರವರನ್ನು ಭೇಟಿ ಮಾಡಿ ಚಿಕ್ಕಮಗಳೂರಿನ ಎಲ್ಲಾ 217 ಟವರ್ ಗಳಿಗೂ 4ಜಿ ಸೇವೆಯನ್ನು ನೀಡುವಂತೆ ಮನವಿ ಮಾಡಿದ್ದೆ. ನನ್ನ ಮನವಿಯ ಪ್ರತಿಫಲವಾಗಿ ಇದೀಗ ಚಿಕ್ಕಮಗಳೂರಿನ 217 ಟವರ್ ನಲ್ಲಿ 165 ಕ್ಕೂ ಹೆಚ್ಚು ಟವರ್ ಗಳಲ್ಲಿ 4ಜಿ ಸೇವೆ ಕಾರ್ಯರಂಭ ಮಾಡಿದ್ದು ಉಳಿದ ಟವರ್‌ಗಳಿಗೂ ಉಪಕರಣ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ.


ಚಿಕ್ಕಮಗಳೂರು ಜಿಲ್ಲೆಯಲ್ಲಿ ಯಾವುದೇ ರೀತಿಯ ಸಂಪರ್ಕವಿರದ ಅನೇಕ ಹಳ್ಳಿಗಳಿಗೆ ಮೊಬೈಲ್ ಟವರ್‌ನ ಅಗತ್ಯತೆಯನ್ನು ಮನಗಂಡು 26 ಹಳ್ಳಿಗಳಿಗೆ ಹೊಸ 4ಜಿ ಟವರ್‌ನ ಕಾರ್ಯಕ್ಕೆ ಅಗತ್ಯವಿದ್ದ ಜಾಗವನ್ನು ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಮಂಜೂರಾತಿ ಮಾಡಿಸಿದ್ದಲ್ಲದೆ, ಕೇಂದ್ರ ಸರ್ಕಾರ ಮತ್ತು ಬಿ.ಎಸ್.ಎನ್.ಎಲ್. ಅಧಿಕಾರಿಗಳೊಂದಿಗೆ ನಿರಂತರ ಹತ್ತಾರು ಸಭೆಗಳನ್ನು ನೆಡೆಸಿದ್ದರ ಫಲವಾಗಿ ಈಗಾಗಲೇ 17 ಟವರ್‌ನಲ್ಲಿ 4ಜಿ ಸೇವೆ ಕಾರ್ಯಾರಂಭ ಆಗುವಂತೆ ಮಾಡಲಾಗಿದ್ದು, ಉಳಿದ 9 ಸ್ಥಳಗಳಲ್ಲಿ ಉಪಕರಣ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದ್ದು ಶೀಘ್ರದಲ್ಲಿ 4ಜಿ ಸೇವೆ ನೀಡಲಾಗುವುದು. 4ಜಿ ಟವರ್ ಸಂಪರ್ಕಕ್ಕೆ ಅಗತ್ಯವಾದ ಓ.ಎಫ್.ಸಿ ಅಥವಾ ಮೈಕ್ರೋಲಿಂಕ್ ದೊರೆಯದಂತಹ ಹಳ್ಳಿಯಾದ ಮೂಡಿಗೆರೆ ತಾಲ್ಲೂಕಿನ, ಅಲೆಖಾನ್ ಹೊರಟ್ಟಿ ಗ್ರಾಮಕ್ಕೆ ಕೇಂದ್ರ ಸರ್ಕಾರದ ನೆರವಿನಿಂದ ಉಪಗ್ರಹ (ಸೆಟಲೈಟ್)ನ ಮೂಲಕ ಸಂಪರ್ಕ ಕಲ್ಪಿಸಿ ಗ್ರಾಹಕರಿಗೆ 4ಜಿ ಸೇವೆ ನೀಡಲಾಗಿದೆ. ಇದು ರಾಜ್ಯದಲ್ಲೇ ಪ್ರಥಮ ಉಪಗ್ರಹ ಸಂಪರ್ಕವೆಂದು ಪರಿಗಣಿಸಲಾಗಿದೆ.

ಬಿ.ಎಸ್.ಎನ್.ಎಲ್‌.ನ ಟವರ್‌ಗಳಿಗೆ ಅಗತ್ಯವಾದ ಬ್ಯಾಟರಿ ಇಲ್ಲದಿರುವುದನ್ನು ಅರ್ಥ ಮಾಡಿಕೊಂಡು ನವದೆಹಲಿಯಲ್ಲಿ ಬಿ.ಎಸ್.ಎನ್.ಎಲ್‌ನ ಉನ್ನತ ಅಧಿಕಾರಿಗಳನ್ನು ಭೇಟಿಮಾಡಿ, ಚಿಕ್ಕಮಗಳೂರು ಜಿಲ್ಲೆಗೆ ಮೊದಲ ಹಂತದಲ್ಲಿ ಸುಮಾರು 51 ಸ್ಥಳಕ್ಕೆ ಬ್ಯಾಟರಿ ಮಂಜೂರಾತಿ ಮಾಡಿಸಿದ್ದು, ಈ ಎಲ್ಲಾ ಬ್ಯಾಟರಿಗಳು ಈಗ ಜಿಲ್ಲೆಗೆ ಪೂರೈಕೆಯಾಗಿ ಭರದಿಂದ ಅಳವಡಿಕೆ ಆಗುತ್ತಿದೆ ಮತ್ತು ರಾಜ್ಯಕ್ಕೆ ಒಟ್ಟು ಬಿಡುಗಡೆಯಾದ 92 ಬ್ಯಾಟರಿಗಳಲ್ಲಿ ಶೇ.50 ಕ್ಕೂ ಹೆಚ್ಚು ಬ್ಯಾಟರಿಗಳು ಚಿಕ್ಕಮಗಳೂರು ಜಿಲ್ಲೆಗೆ ಬಂದಿದೆ ಎಂಬುದನ್ನು ಗಮನಿಸಬೇಕಾಗಿ ವಿನಂತಿ.

ಇದಲ್ಲದೆ, ಉಳಿದ ಸ್ಥಳಗಳಿಗೂ ಬ್ಯಾಟರಿ ಮತ್ತು ಇತರೆ ಉಪಕರಣಗಳ ಬೇಡಿಕೆ ಸಲ್ಲಿಸಲಾಗಿದೆ. ಇದರ ಜೊತೆಗೆ ಇನ್ನೂ 43 ಹಳ್ಳಿಗಳಿಗೆ ಹೊಸ 4ಜಿ ಟವರ್‌ನ ಬೇಡಿಕೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ಸರ್ವೇ ಕಾರ್ಯ ಪ್ರಗತಿಯಲ್ಲಿದೆ. ಇಷ್ಟೆಲ್ಲಾ ಟವರ್ ಗಳೂ ಬಂದರೂ ಇನ್ನೂ ಕೆಲವು ಕುಗ್ರಾಮದ ಗ್ರಾಹಕರಿಗೆ ಸಂಪರ್ಕ ಸಿಗದೇ ಇರಬಹುದೆಂಬ ಕಾರಣಕ್ಕೆ ಅಂತಹ ಗ್ರಾಹಕರಿಗೆ ನೇರವಾಗಿ ಉಪಗ್ರಹದ (ಸೆಟಲೈಟ್) ಮೂಲಕ ಸಂಪರ್ಕ ನೀಡುವ ಬಿ.ಎಸ್.ಎನ್.ಎಲ್‌ನ ಯೋಜನೆಯನ್ನು ಚಿಕ್ಕಮಗಳೂರು ಜಿಲ್ಲೆಗೂ ವಿಸ್ತರಿಸುವಂತೆ ಕೇಂದ್ರ ಸರ್ಕಾರದ ಮಂತ್ರಿಗಳು ಮತ್ತು ಬಿ.ಎಸ್.ಎನ್.ಎಲ್‌ನ ಅಧಿಕಾರಿಗಳಿಗೆ ನಿರಂತರವಾಗಿ ಮನವಿ ಸಲ್ಲಿಸಿದ್ದು ಆಶಾದಾಯಕ ಫಲಿತಾಂಶವನ್ನು ನೀರಿಕ್ಷಿಸಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಗೆ ಮೂರು ಎಫ್.ಎಮ್ ರೇಡಿಯೊ ಕೇಂದ್ರ ಮಂಜೂರಾಗಿದ್ದು, ಆದಷ್ಟು ಶೀಘ್ರವಾಗಿ ಸ್ಥಾಪನೆ ಮಾಡುವಂತೆ ಸಂಬಂಧಪಟ್ಟ ಕೇಂದ್ರ ಸರ್ಕಾರದ ಸಚಿವರಿಗೆ ಮನವಿ ಮಾಡಿದ್ದೇನೆ.

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆಯಿಂದ ಬಿ.ಎಸ್.ಎನ್.ಎಲ್‌ನ ಸೇವೆಯಲ್ಲಿ ವ್ಯತ್ಯಯವಾಗುತ್ತಿದ್ದು, ಮೆಸ್ಕಾಂ ಇಲಾಖೆಯೊಂದಿಗೆ ಹಲವಾರು ಸಭೆಗಳನ್ನು ನಡೆಸಿದ್ದು, ನಿರಂತರ ಜ್ಯೋತಿ ವಿದ್ಯುತ್‌ನ್ನು ಬಿ.ಎಸ್.ಎನ್.ಎಲ್‌ಗೂ ಕೊಡಬೇಕೆಂಬ ಪ್ರಸ್ತಾಪನೆ ರಾಜ್ಯ ಸರ್ಕಾರದ ಮುಂದಿದೆ. ರಸ್ತೆ ಅಭಿವೃದ್ಧಿ, ನೀರಿನ ಪೈಪ್ ಜೋಡಣೆ ಮತ್ತು ಮೆಸ್ಕಾಂ ಕಂಬಗಳ ದುರಸ್ತಿ ಸಮಯದಲ್ಲಿ ಬಿ.ಎಸ್.ಎನ್.ಎಲ್ ಮುಖ್ಯ ಓ.ಎಫ್.ಸಿ ಕೇಬಲ್ ಗಳಿಗೆ ಹಾನಿ ಆಗುತ್ತಿದ್ದು, ಅದರಿಂದ ನೆಟ್‌ವರ್ಕ್ ಕಡಿತದ ಸಮಸ್ಯೆ ಆಗುತ್ತಿದ್ದು, ಈ ಎಲ್ಲಾ ಇಲಾಖೆಯೊಂದಿಗೆ ಸಮನ್ವಯ ಸಭೆಗಳನ್ನು ನೆಡೆಸುವ ಮೂಲಕ ಸಮಸ್ಯೆಗಳನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದೇನೆ. ಮತ್ತು ಪೂರ್ವ ಸೂಚನೆಯಿಲ್ಲದೆ ಅಗೆದು ಕೇಬಲ್ ಕಡಿತ ಮಾಡಿದರೆ, ಅಂತವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲು ಸೂಚನೆ ನೀಡಲಾಗಿದೆ. ಬಿ.ಎಸ್.ಎನ್.ಎಲ್‌ನ ಪ್ರತಿ ಗ್ರಾಹಕರ ಮನವಿಗೆ ನಾನೇ ಖುದ್ದಾಗಿ ಸ್ಪಂದಿಸುತ್ತಿದ್ದು, ನ್ಯೂನತೆಗಳನ್ನು ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆಗಾಗ ಸೂಚನೆ ನೀಡುತ್ತಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿ.ಎಸ್.ಎನ್.ಎಲ್ ನ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಗುರಿ ಹೊಂದಿದ್ದು, ಅದಕ್ಕೆ ಅವಶ್ಯವಿರುವ ಎಲ್ಲಾ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಿರುವುದು ಗಮನಿಸಬೇಕೆಂದು ವಿನಂತಿ.
ಆದಾಗ್ಯೂ ಖಾಂದ್ಯಾ ಹೋಬಳಿಯ ಬಿದಿರೆ ಗ್ರಾಮದ ಬಿ.ಎಸ್.ಎನ್.ಎಲ್ ಟವರೂ ಸೇರಿದಂತೆ, ಚಿಕ್ಕಮಗಳೂರಿನ ಪ್ರತಿ ಟವರ್‌ನಿಂದಲೂ ಗುಣಮಟ್ಟದ ಸೇವೆ ನೀಡಲು ಇಲಾಖೆಯನ್ನು ಅಣಿಗೊಳಿಸುತ್ತಿದ್ದೇನೆ. ಸರಕಾರಿ ವ್ಯವಸ್ಥೆಯಲ್ಲಿ ಟೀಕೆಗಳು ಕರಗಿಹೋಗಿ ಕೆಲಸ ಉಳಿಯಬೇಕೆಂಬುದು ನನ್ನ ಆಶಯ.

Share Information
Continue Reading
Advertisement
2 Comments

2 Comments

    Leave a Reply

    Your email address will not be published. Required fields are marked *