Connect with us

KARNATAKA

ಚಿಕ್ಕಮಗಳೂರಿನಲ್ಲಿ ನಡೆದ ಹೃದಯವಿದ್ರಾವಕ ಘಟನೆ ..ಒಂದೇ ಕುಟುಂಬದ ಮೂವರು ಸೇರಿ ಐವರು ನೀರು ಪಾಲು

ಚಿಕ್ಕಮಗಳೂರು ನವೆಂಬರ್ 25: ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿ ನಾಲ್ವರು ನೀರು ಪಾಲಾದ ಘಟನೆ ಮಾಸುವ ಮುನ್ನವೇ ಚಿಕ್ಕಮಗಳೂರಿನಲ್ಲಿ ಮತ್ತೊಂದು ಆಘಾತ ಸಂಭವಿಸಿದ್ದು, ಒಂದೇ ಕುಟುಂಬದ ಮೂವರು ಸೇರಿ ಐವರು ನೀರು ಪಾಲಾದ ಘಟನೆ ಚಿಕ್ಕಮಗಳೂರು ತಾಲೂಕಿನ ವಸ್ತಾರೆ ಸಮೀಪದ ಹರೇಕೆರೆಯಲ್ಲಿ ನಡೆದಿದೆ.


ಮೃತರ ಯುವಕರನ್ನು ಸುದೀಪ್, ಸಂದೀಪ್, ದಿಲೀಪ್, ರಘು ಹಾಗೂ ದೀಪಕ್ ಎಂದು ಗುರುತಿಸಲಾಗಿದೆ. ನವೆಂಬರ್ 20ರಂದು ಸಂದೀಪ್ ಅಕ್ಕ ಸಂಧ್ಯಾಳ ಮದುವೆಯಾಗಿತ್ತು. ಮದುವೆ ಬಳಿಕ ಬೀಗರ ಊಟದ ಕಾರ್ಯಕ್ರಮವೂ ಮುಗಿದಿತ್ತು. ಇಂದು ಅಕ್ಕ-ಬಾವನನ್ನು ಬಾವನ ಮನೆಗೆ ಕಳಿಸಿ ಮದುವೆ ನಂತರದ ಕಾರ್ಯದಲ್ಲಿ ಈ ಯುವಕರು ತೊಡಗಿದ್ದರು.


ಈ ನಡುವೆ ಕೆರೆಯಲ್ಲಿ ಮೀನು ಹಿಡಿದು ತಂದು ಅಡುಗೆ ಮಾಡಿ ಊಟದ ಬಳಿಕ ಪಾತ್ರೆ ಕೊಡಲು ಹೋಗೋಣವೆಂದು ಐವರು ಅಣ್ಣತಮ್ಮಂದಿರು ಕೆರೆಗೆ ಹೋಗಿದ್ದಾರೆ. ಮೀನಿಗೆ ಗಾಳ ಹಾಕುವ ಮುನ್ನ ಈಜಲು ನೀರಿಗೆ ಇಳಿದಿದ್ದಾರೆ. ಆದರೆ ಸುಮಾರು 30 ಅಡಿ ಆಳವಿದ್ದ ಕಾರಣ ಓರ್ವ ನೀರಿನಲ್ಲಿ ಮುಳುಗಿದ್ದಾನೆ. ಅವನನ್ನ ರಕ್ಷಿಸಲು ಮತ್ತೊಬ್ಬ ನೀರಿಗಿಳಿದಿದ್ದಾನೆ.


ಹೀಗೆ ಒಬ್ಬರನ್ನೊಬ್ಬರು ರಕ್ಷಿಸಲು ಒಟ್ಟು ಆರು ಜನ ನೀರಿಗೆ ಇಳಿದಿದ್ದಾರೆ. ಆದರೆ ಬಾನು ಎಂಬುವನು ಈಜಿ ದಡಸೇರಿದ್ದಾನೆ. ಆದರೆ ಉಳಿದ ಐವರು ಯುವಕರು ನೋಡ-ನೋಡುತ್ತಿದ್ದಂತೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ವಿಷಯ ತಿಳಿದು ಮನೆಯವರು ಕೆರೆ ಬಳಿ ಹೋದಾಗ ಮೃತ ಸಂದೀಪ್ ಪ್ರೀತಿಯಿಂದ ಸಾಕಿದ್ದ ನಾಯಿ ಡ್ಯಾನಿ ಕೂಡ ಮಾಲೀಕನಿಗಾಗಿ ಕೆರೆ ಬಳಿ ಅನಾಥನಂತೆ ಕೂತಿತ್ತು. ಕೊನೆಗೆ ಸಂದೀಪ್ ಮೃತದೇಹ ಸಿಕ್ಕ ಬಳಿಕ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ತರುವಾಗ ನಾಯಿ ಅಂಬುಲೆನ್ಸ್ ಹಿಂದೆ ಮಗುವಂತೆ ಓಡಿ ಬಂದಿದ್ದು ಸ್ಥಳೀಯರ ಕಣ್ಣಲ್ಲಿ ನೀರು ತರಿಸಿತ್ತು.

ನಿನ್ನೆ ಮೂಡುಬಿದಿರೆಗೆ ಮದುವೆಗೆಂದು ಬಂದಿದ್ದ ನಾಲ್ವರು ಈಜಲು ತೆರಳಿ ನೀರುಪಾಲದ ಘಟನೆ ಬೆನ್ನಲ್ಲೇ ಇದೀಗ ಚಿಕ್ಕಮಗಳೂರಿನಲ್ಲಿ ಐವರು ಯುವಕರು ಜಲಸಮಾಧಿಯಾಗಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *