LATEST NEWS
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಚೆಸ್ ತಾರೆ ಪ್ರಜ್ಞಾನಂದ
ನವದೆಹಲಿ, ಸೆಪ್ಟೆಂಬರ್ 01: ಫಿಡೆ ಚೆಸ್ ವಿಶ್ವಕಪ್‌ನಲ್ಲಿ ರನ್ನರ್ ಅಪ್ ಭಾರತದ ಚೆಸ್ ತಾರೆ ರಮೇಶಬಾಬು ಪ್ರಜ್ಞಾನಂದ ಮತ್ತು ಅವರ ಪೋಷಕರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೋದಿ, ‘ನೀವು ಉತ್ಕಟ ಚೆಸ್ ಪ್ರೀತಿ ಮತ್ತು ಪರಿಶ್ರಮಕ್ಕೆ ಅನ್ವರ್ಥದಂತಿದ್ದೀರಿ. ಭಾರತದ ಯುವಶಕ್ತಿ ವಿಶ್ವವನ್ನೇ ಗೆಲ್ಲಬಹುದು ಎಂಬುದನ್ನು ತೋರಿಸಿಕೊಟ್ಟಿದ್ದೀರಿ. ನಿಮ್ಮ ಬಗ್ಗೆ ಹೆಮ್ಮೆಯಿದೆ’ ಎಂದಿದ್ದಾರೆ.
ಪ್ರಜ್ಞಾನಂದ ಅವರನ್ನು ದೆಹಲಿ ಕಚೇರಿಯಲ್ಲಿ ಇಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸನ್ಮಾನಿಸಿದ್ದಾರೆ. ಕಳೆದ ವಾರ ಅಜರ್‌ಬೈಜಾನ್‌ನ ಬಾಕುವಿನಲ್ಲಿ ನಡೆದ ವಿಶ್ವಕಪ್ ಚೆಸ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಪ್ರಜ್ಞಾನಂದ ಅವರು ಫೈನಲ್‌ನಲ್ಲಿ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಟೈಬ್ರೇಕ್‌ನಲ್ಲಿ ಸೋತಿದ್ದರು.
Had very special visitors at 7, LKM today.
Delighted to meet you, @rpragchess along with your family.
You personify passion and perseverance. Your example shows how India's youth can conquer any domain. Proud of you! https://t.co/r40ahCwgph
— Narendra Modi (@narendramodi) August 31, 2023
ಇತ್ತೀಚೆಗೆ ಟೂರ್ನಿ ಮುಗಿಸಿ ತವರಿಗೆ ಮರಳಿದ 18 ವರ್ಷದ ‘ಪ್ರಗ್ಗು’ ಅವರಿಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ಕೋರಲಾಗಿತ್ತು.