LATEST NEWS
ಚೆರ್ಕಾಡಿ ಕಂಬಳದ ವಿಧಿವಿಧಾನ ಮುಗಿಸಿ ಇಹಲೋಕ ತ್ಯಜಿಸಿದ ಜಯರಾಮ ಹೆಗ್ಡೆ
ಉಡುಪಿ ಡಿಸೆಂಬರ್ 10: ನೂರಾರು ವರ್ಷಗಳ ಇತಿಹಾಸ ಇರುವ ಚೇರ್ಕಾಡಿ ಕಂಬಳಕ್ಕೆ ಯಾವುದೇ ಚ್ಯುತಿ ಬರದಂತೆ ಕಂಬಳದ ಎಲ್ಲಾ ವಿಧಿವಿಧಾನಗಳನ್ನು ಮುಗಿಸಿ ಗುತ್ತಿನ ಮನೆಯ ಹಿರಿಯ ಜಯರಾಮ ಹೆಗ್ಡೆ ಕೊನೆಯುಸಿರೆಳೆದಿದ್ದಾರೆ.
ಸುಮಾರು 600 ವರ್ಷ ಇತಿಹಾಸವಿರುವ ಈ ಕಂಬಳವು ಪಟ್ಟದ ಹೆಗ್ಡೆಯವರಾದ ಜಯರಾಮ ಹೆಗ್ಡೆ ಅವರ ನೇತೃತ್ವದಲ್ಲಿ ನಡೆದಿದೆ. ಇದು ಅನಾದಿಕಾಲದ ಜೈನ ಮನೆತನದವರ ಕಂಬಳ. ಸುಮಾರು 10 ಎಕ್ರೆ ವಿಸ್ತೀರ್ಣದ ಕಂಬಳಗದ್ದೆ ಹಾಗೂ ಬಾಕಿಮಾರು ಗದ್ದೆಗಳನ್ನು ಹೊಂದಿದ್ದು, ಮನಸೂರೆಗೊಳ್ಳುವ ಪ್ರಕೃತಿ ಸೌಂದರ್ಯವಿದೆ.
ಚೇರ್ಕಾಡಿಯಲ್ಲಿ ಕಳೆದ ಎರಡು ದಿನಗಳ ಕಾಲ ಸಾಂಪ್ರದಾಯಿಕ ಕಂಬಳ ವರ್ಷಂಪ್ರತಿ ಯಂತೆ ನಡೆಯಿತು . ಕಂಬಳ ನಡೆಯುವಾಗ ಗುತ್ತಿನ ಮನೆತನದ ಹಿರಿಯರು ಮುಖ್ಯಸ್ಥರಾಗಿ ಎಲ್ಲವನ್ನು ನಿರ್ವಹಿಸುವ ಪರಿಪಾಠ ಇದೆ . ತಮ್ಮ ಅತ್ಯಂತ ಇಳಿ ವಯಸ್ಸಿನಲ್ಲಿ ಗುತ್ತಿನ ಮನೆಯ ಎಲ್ಲಾ ಕೆಲಸಗಳನ್ನು ನಿರ್ವಹಿಸಿದ ಚೇರ್ಕಾಡಿ ಜಯರಾಮ ಹೆಗ್ಡೆ ಎನ್ನುವವರು ಕೊನೆಯುಸಿರೆಳೆದಿದ್ದಾರೆ . ಕಂಬಳ ಮುಗಿಯುವವರೆಗಿನ ಎಲ್ಲಾ ವಿಧಿ ವಿಧಾನಗಳಲ್ಲಿ ಅವರು ಭಾಗವಹಿಸಿದ್ದರು. ಕೊನೆಯದಾಗಿ ತೆಂಗಿನಕಾಯಿಯನ್ನು ಒಡೆದು ಮನೆ ಸೇರಿದ್ದರು. ಮನೆಗೆ ಹೋದ ನಂತರ ಕೊನೆಯುಸಿರೆಳೆದಿದ್ದಾರೆ. 90 ವಯಸ್ಸು ಮೀರಿದ ಇವರು, ತಮ್ಮ ಅನಾರೋಗ್ಯಗಳನ್ನು ಲೆಕ್ಕಿಸದೆ ಕಂಬಳ ನಡೆಸಿಕೊಟ್ಟಿದ್ದಾರೆ. ಒಂದು ವೇಳೆ ಕಂಬಳ ನಡೆಯುವಾಗ ಅಥವಾ ಅದಕ್ಕಿಂತ ಮುಂಚೆ ಸಾವು ಸಂಭವಿಸಿದ್ದರೆ ಈ ಕಂಬಳ ರದ್ದಾಗ ಬೇಕಿತ್ತು. ಆದರೆ ಕಂಬಳಕ್ಕೆ ಯಾವುದೇ ಚ್ಯುತಿ ಬಾರದಂತೆ ಜಯರಾಮ ಹೆಗ್ಡೆ ತಮ್ಮ ಜೀವನದ ಪಯಣ ಮುಗಿಸಿದ್ದಾರೆ.