Connect with us

  LATEST NEWS

  ರಾಸಾಯನಿಕ ಸಾಗಿಸುತ್ತಿದ್ದ ಟ್ಯಾಂಕರ್ ಲಾರಿ ಪಲ್ಟಿ – ತಡರಾತ್ರಿಯವರೆಗೂ ನಡೆದ ಕಾರ್ಯಾಚರಣೆ

  ಮಂಗಳೂರು ಮಾರ್ಚ್ 22 : ರಾಸಾಯನಿಕ ತುಂಬಿದ್ದ ಟ್ಯಾಂಕರ್ ಲಾರಿಯೊಂದು ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪು ಬಳಿ ಮಂಗಳವಾರ ತಡರಾತ್ರಿ ನಡೆದಿದೆ. ಈ ಘಟನೆಯಲ್ಲಿ ಚಾಲಕ ಮಯೂರ್ (40) ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಈ ಲಾರಿ ಕೇರಳದ ಕೊಚ್ಚಿಯಿಂದ ಬೈಕಂಪಾಡಿಯಲ್ಲಿರುವ ಪೇಂಟ್ ತಯಾರಿಸುವ ಕೈಗಾರಿಕೆಗೆ ರಾಸಾಯನಿಕ ಸಾಗಿಸುತ್ತಿದ್ದು ಟ್ಯಾಂಕರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.


  ಅನಿಲ ಹೊಂದಿದ್ದ ಟ್ಯಾಂಕರ್ ತೆರವು ತಡರಾತ್ರಿ 1 ಗಂಟೆಯವರೆಗೆ ನಡೆಯಿತು. ಅಗ್ನಿ ಶಾಮಕ ದಳ, ಎಸಿಪಿ ಧನ್ಯಾ ಎನ್. ನಾಯಕ್, ದಕ್ಷಿಣ ಸಂಚಾರ ಠಾಣೆಯ ರಮೇಶ್ ಹಾನಾಪುರ್, ಉಳ್ಳಾಲ ಠಾಣಾಧಿಕಾರಿ ಸಂದೀಪ್ ಜಿ.ಎಸ್ ಸ್ಥಳದಲ್ಲಿ ಹಾಜರಿದ್ದು ತೆರವು ಕಾರ್ಯಾಚರಣೆಗೆ ಮಾರ್ಗದರ್ಶನ ಮಾಡಿದರು‌. ನಡು ರಸ್ತೆಯಲ್ಲೇ ಉರುಳಿದ್ದ ಟ್ಯಾಂಕರಿನಿಂದ ಸಣ್ಣ ಪ್ರಮಾಣದಲ್ಲಿ ರಾಸಾಯನಿಕ ಸೋರಿಕೆ ಉಂಟಾಗಿ ಪರಿಸರವಿಡೀ ದುರ್ವಾಸನೆ ಬೀರುತಿತ್ತು. ಸ್ಥಳಕ್ಕಾಗಮಿಸಿದ ಬೈಕಂಪಾಡಿ ಬಿಎಎಸ್ ಎಫ್ ಸುರಕ್ಷಾ ತಂಡ ಸಮೀಪದ ವಾಣಿಜ್ಯ ಮಳಿಗೆಗಳ ವಿದ್ಯುತ್ ದೀಪಗಳನ್ನು ಆರಿಸಲು ಸೂಚನೆ ನೀಡಿತು. ರಾ.ಹೆ.66 ರ ಎರಡೂ ಕಡೆಗಳಲ್ಲಿ ವಾಹನಗಳು ಸಂಚರಿಸದಂತೆ ಸಂಚಾರ ಠಾಣಾ ಪೊಲೀಸರು ತಡೆಹಿಡಿದಿದ್ದರು. ಬಿಎಎಸ್ ಎಫ್ ನಿಂದ ಬಂದ ಬೃಹತ್ ಗಾತ್ರದ ಕ್ರೇನ್ ಸಹಿತ ಎರಡು ಸಣ್ಣ ಕ್ರೇನ್ ಗಳನ್ನು ಬಳಸಿಕೊಂಡು 3 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಲಾಯಿತು. ಮೊದಲಿಗೆ ಲಾರಿಯನ್ನು ಮೇಲಕ್ಕೆತ್ತಿ, ನಂತರ ಟ್ಯಾಂಕ್ ಅನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ, ಇನ್ನೊಂದು ಲಾರಿಗೆ ಲೋಡ್ ಮಾಡಿ ತಕ್ಷಣ ಕಳುಹಿಸಲಾಯಿತು. ರಾಸಾಯನಿಕ ಹೊಂದಿರುವ ಟ್ಯಾಂಕ್ ಹಲವು ಪದರಗಳು ಹಾಗೂ ಸುತ್ತಲೂ ಕಬ್ಬಿಣದ ಸುರಕ್ಷಾ ಕವಚ ಇರುವುದರಿಂದ ಸಣ್ಣ ಪ್ರಮಾಣದಲ್ಲಿ ಸೋರಿಕೆ ಉಂಟಾಗಿದೆ. ಸಾಬೂನಿಗೆ ಹಾಕುವ ರಾಸಾಯನಿಕ ಆಗಿರುವುದರಿಂದ ಅಷ್ಟೊಂದು ಪರಿಣಾಮಕಾರಿಯಾಗಿರುವುದಿಲ್ಲ ಎಂದು ಬಿಎಎಸ್ ಎಫ್ ಸುರಕ್ಷತಾ ಅಧಿಕಾರಿ ತಿಳಿಸಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply