LATEST NEWS
24 ಗಂಟೆಯೊಳಗೆ ಚಾರ್ಮಾಡಿ ಸಂಚಾರಕ್ಕೆ ನೀಡಿದ್ದ ಆದೇಶ ವಾಪಾಸ್…!!
ಚಿಕ್ಕಮಗಳೂರು: ಸುಮಾರು ಒಂದೂವರೆ ವರ್ಷಗಳ ನಂತರ ಚಾರ್ಮಾಡಿ ಘಾಟ್ ನಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿದ ಚಿಕ್ಕಮಗಳೂರು ಜಿಲ್ಲಾಧಿಕಾರಿ 24 ಗಂಟೆಗಳ ಒಳಗೆ ಆದೇಶವನ್ನು ಹಿಂಪಡೆದಿದ್ದಾರೆ. ಜಿಲ್ಲಾಧಿಕಾರಿಗಳ ಈ ಕಣ್ಮುಚ್ಚಾಲೆ ಆಟಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಬಾರಿಯ ಮಳೆಗಾಲ ಸಂದರ್ಭ ಚಾರ್ಮಾಡಿ ಘಾಟ್ ನಲ್ಲಿ ಉಂಟಾದ ಗುಡ್ಡ ಕುಸಿತದ ಹಿನ್ನಲೆ ಚಾರ್ಮಾಡಿ ಘಾಟ್ ನಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶವನ್ನು ನಿರಾಕರಿಸಲಾಗಿತ್ತು. ಕಾರು, ಬೈಕು ಅಂಬುಲೆನ್ಸ್ ಸೇರಿದಂತೆ ಲಘು ವಾಹನಗಳಿಗೆ ಮಾತ್ರ ಅವಕಾಶವಿತ್ತು.
ಈ ನಡುವೆ ಬುಧವಾರ ಸಂಜೆ ಆದೇಶ ಹೊರಡಿಸಿದ ಚಿಕ್ಕಮಗಳೂರು ಜಿಲ್ಲಾಧಿಕಾರಿ, ಚಾರ್ಮಾಡಿ ಘಾಟಿಯಲ್ಲಿ ಕೆಂಪು ಬಸ್ ಸೇರಿದಂತೆ ಆರು ಚಕ್ರದ ಲಾರಿಗಳ ಸಂಚಾರಕ್ಕೆ ಅನುಮತಿ ನೀಡಿದ್ದರು. ಇದರಿಂದ ಜನಸಾಮಾನ್ಯರು ಸಂತಸ ವ್ಯಕ್ತಪಡಿಸಿದರು. ಆದರೆ ಆದೇಶ ಮಾಡಿದ 24 ಗಂಟೆಯಲ್ಲೇ ಆದೇಶವನ್ನು ವಾಪಾಸ್ ಪಡೆದಿದ್ದಾರೆ. ಚಾರ್ಮಾಡಿ ಘಾಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಒಳಪಡುವ ಭಾಗದಲ್ಲಿ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದ್ದು ಈ ಭಾಗದಲ್ಲಿ ವಾಹನಗಳ ದಟ್ಟಣೆ ಹೆಚ್ಚಾದಲ್ಲಿ ರಸ್ತೆ ದುರಸ್ತಿ ಕಾರ್ಯಕ್ಕೆ ತೊಂದರೆಯಾಗುತ್ತದೆ. ಅಷ್ಟೆ ಅಲ್ಲದೆ ಅಪಘಾತ ಸಂಭವಿಸುವ ಸಾಧ್ಯತೆಗಳಿವೆ ಎಂಬ ಮಂಗಳೂರು ಜಿಲ್ಲಾಧಿಕಾರಿ ಮನವಿ ಮೇರೆಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಬುಧವಾರ ನೀಡಿದ ಆದೇಶವನ್ನು ಹಿಂಪಡೆದಿದ್ದಾರೆ.
ಇನ್ನು ಆರು ಚಕ್ರದ ಲಾರಿಗಳು ಸಂಚಾರಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ಈ ಭಾಗದಲ್ಲಿ ಸಂಚಾರ ಆರಂಭಿಸಿದ ಲಾರಿಗಳು ಕೊಟ್ಟಿಗೆಹಾರದ ಬಳಿ ಸಂಕಷ್ಟಕ್ಕೀಡಾಗಿವೆ. ಚಾರ್ಮಾಡಿ ಘಾಟಿಯಲ್ಲಿ ಕೆಂಪು ಬಸ್ ಗಳ ಸಂಚಾರ ಆರಂಭಗೊಂಡಿದ್ದ ರಿಂದ ಜನಸಾಮಾನ್ಯರು ಸಂತೋಷವಾಗಿದ್ದರು. ಖಾಸಗಿ ವಾಹನಗಳಿಗೆ ಸಾವಿರಾರು ರೂಪಾಯಿ ಹಣ ನೀಡಿ ಉಡುಪಿ ಹಾಗೂ ಮಂಗಳೂರಿಗೆ ಹೋಗುವ ರೋಗಿಗಳು ನಿಟ್ಟುಸಿರು ಬಿಟ್ಟಿದ್ದರು. ಆದರೆ ಸರ್ಕಾರ ನೀಡಿದ ಆದೇಶವನ್ನು ಒಂದೇ ದಿನದಲ್ಲಿ ಹಿಂಪಡೆದಿರುವುದು ಜನಸಾಮಾನ್ಯರು ಮತ್ತೆ ಸಂಕಷ್ಟಕ್ಕೀಡಾಗುವಂತೆ ಮಾಡಿದೆ.