DAKSHINA KANNADA
ಪೊಲೀಸರಿಗೆ ತಲೆನೋವಾದ ಚೈತ್ರಾ ಹೆಬ್ಬಾರ್ ನಾಪತ್ತೆ ಪ್ರಕರಣ…!!
ಪುತ್ತೂರು ಫೆಬ್ರವರಿ 24: ಕಳೆದ ಒಂದು ವಾರದಿಂದ ನಾಪತ್ತೆಯಾಗಿರುವ ಪಿ.ಎಚ್. ಡಿ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದೆ. ಈ ನಡುವೆ ಹಿಂದೂ ಸಂಘಟನೆಗಳು ಪೊಲೀಸ್ ಇಲಾಖೆಗೆ ಎರಡು ದಿನಗಳ ಗಡುವು ನೀಡಿದ್ದು, ಪ್ರತಿಭಟನೆಯ ಎಚ್ಚರಿಕೆ ನೀಡಿವೆ.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಿಎಚ್ಡಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿನಿ, ಪುತ್ತೂರಿನ ಪುರುಷರ ಕಟ್ಟೆ ನಿವಾಸಿ ಚೈತ್ರಾ ಹೆಬ್ಬಾರ್ ನಾಪತ್ತೆಯಾದ ಯುವತಿ. ಚೈತ್ರಾ ತಂದೆ ಮೃತಪಟ್ಟಿರುವ ಹಿನ್ನಲೆಯಲ್ಲಿ ಕದ್ರಿಯಲ್ಲಿರುವ ದೊಡ್ಡಪ್ಪನ ಮನೆಯಿಂದಲೇ ಶಿಕ್ಷಣ ಪಡೆಯುತ್ತಿದ್ದು, ಆಕೆಯ ಶಿಕ್ಷಣದ ಜವಾಬ್ದಾರಿ ಆಕೆಯ ದೊಡ್ಡಪ್ಪ ಹೊತ್ತಿದ್ದರು. ಬೀರಿ ಸಮೀಪದ ಮಾಡೂರು ಎಂಬಲ್ಲಿನ ಪಿಜಿಯಿಂದ ವಿವಿ ಗೆ ಚೈತ್ರಾ ತೆರಳುತ್ತಿದ್ದರು ಎಂದು ಹೇಳಲಾಗಿದೆ.
ಈ ನಡುವೆ ಚೈತ್ರಾ ತಂಗಿದ್ದ ಪಿಜಿಗೆ ಯುವಕನೋರ್ವ ಬರುತ್ತಿದ್ದ ಬಗ್ಗೆ ಮಾಹಿತಿಯನ್ನು ಚೈತ್ರಾಳ ದೊಡ್ಡಪ್ಪನಿಗೆ ಸ್ಥಳೀಯ ಬಜರಂಗದಳ ಕಾರ್ಯಕರ್ತರು ತಿಳಿಸಿದ್ದರು. ಈ ನಡುವೆ ಯುವಕ ಜೊತೆ ಪಿಜಿಯಿಂದ ಸ್ಕೂಟರ್ ನಲ್ಲಿ ಚೈತ್ರಾ ತೆರಳಿದ್ದು, ಬಳಿಕ ಆಕೆಯ ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿತ್ತು. ಈ ಹಿನ್ನಲೆ ಈ ಕುರಿತು ಉಳ್ಳಾಲ ಪೋಲೀಸ್ ಠಾಣೆಯಲ್ಲಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಚೈತ್ರಾ ನಾಪತ್ತೆಯ ಹಿಂದೆ ಡ್ರಗ್ಸ್ ಮಾಫಿಯಾದ ಕೈವಾಡ ಶಂಕೆ ವ್ಯಕ್ತವಾಗಿದ್ದು. ನಾಪತ್ತೆಯಾದ ಯುವತಿಯನ್ನು ಹುಡುಕಿಕೊಡಲು ಪೋಲೀಸರಿಗೆ ಎರಡು ದಿನಗಳ ಗಡುವನ್ನು ಭಜರಂಗದಳದ ಕಾರ್ಯಕರ್ತರು ನೀಡಿದ್ದಾರೆ. ಇಲ್ಲದಿದ್ದಲ್ಲಿ ಉಳ್ಳಾಲ ಪೋಲೀಸ್ ಠಾಣೆ ಮುಂಭಾಗದಲ್ಲಿ ಪ್ರತಿಭಟನೆಯ ಎಚ್ಚರಿಕೆಯನ್ನು ಭಜರಂಗದಳ ಕರ್ನಾಟಕ ಪ್ರಾಂತ ಸಹಸಂಚಾಲಕ್ ಮುರಳೀಕೃಷ್ಣ ಹಸಂತಡ್ಕ ನೀಡಿದ್ದಾರೆ.
ಈ ನಡುವೆ ನಿವಾಸಿ ಚೈತ್ರಾ ಹೆಬ್ಬಾರ್ ಅನ್ಯಕೋಮಿನ ಯುವಕನ ಜೊತೆ ಪರಾರಿಯಾಗಿರುವ ಸಾದ್ಯತೆ ಇದೆ ಎಂದು ಹೇಳಲಾಗಿದೆ. ನಾಪತ್ತೆಯಾದ ಬಳಿಕ ಚೈತ್ರಾ ಹೆಬ್ಬಾರ್ ಸುರತ್ಕಲ್ ನ ಎಟಿಎಂ ಒಂದರಲ್ಲಿ ಹಣ ವಿಥ್ ಡ್ರಾ ಮಾಡಿದ್ದಾರೆ. ಇದೀಗ ಚೈತ್ರಾ ಹೆಬ್ಬಾರ್ ಅಕೌಂಟ್ ನ್ನು ಪೊಲೀಸರು ಬ್ಲಾಕ್ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.