LATEST NEWS
ಲಕ್ಷ್ಮಿವಿಲಾಸ ಬ್ಯಾಂಕ್ ಮೇಲೆ ಕೇಂದ್ರ 1 ತಿಂಗಳ ಮಟ್ಟಿಗೆ ತಾತ್ಕಾಲಿಕ ನಿಷೇಧ
ನವದೆಹಲಿ, ನವೆಂಬರ‌್ 18: ಆರ್ಥಿಕ ಸ್ಥಿತಿ ಹದಗೆಡುತ್ತಿರೋ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಲಕ್ಷ್ಮಿ ವಿಲಾಸ ಬ್ಯಾಂಕನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ.
ಈ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಾಹಿತಿ ನೀಡಿದ್ದು, ಲಕ್ಷ್ಮಿ ವಿಲಾಸ ಬ್ಯಾಂಕ್ ಮೇಲೆ ಒಂದು ತಿಂಗಳು ತಾತ್ಕಾಲಿಕವಾಗಿ ನಿಷೇಧ ಹೇರಲಾಗಿದೆ. ಬ್ಯಾಂಕ್ ಖಾತೆದಾರರಿಗೆ ಹಣ ಹಿಂಪಡೆಯುವ ಗರಿಷ್ಠ ಮಿತಿಯನ್ನು 25,000 ರೂ.ಗೆ ನಿಗದಿಪಡಿಸಲಾಗಿದೆ. ಆರ್‌ಬಿಐ ನಿಂದ ವಿಶೇಷ ಆದೇಶಗಳನ್ನು ಸ್ವೀಕರಿಸಿದ ಬಳಿಕ ಬ್ಯಾಂಕ್ ವೈದ್ಯಕೀಯ ಚಿಕಿತ್ಸೆ, ಶಿಕ್ಷಣ, ವಿವಾಹ ಮತ್ತು ಅನಿವಾರ್ಯ ತುರ್ತು ಸಂದರ್ಭಗಳಲ್ಲಿ ಮಿತಿಗಿಂದ ಹೆಚ್ಚಿನ ಹಣವನ್ನು ನೀಡಬಹುದು. ಆರ್‌ಬಿಐ ಸಲಹೆ ಮೇರೆಗೆ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
Supersession of the Board of Directors – Appointment of Administrator – The Lakshmi Vilas Bank Ltdhttps://t.co/x8Hc5SdFzj
— ReserveBankOfIndia (@RBI) November 17, 2020
ಬ್ಯಾಂಕಿನ ನಿರ್ದೇಶಕರ ಮಂಡಳಿಯನ್ನು ರದ್ದುಪಡಿಸಲಾಗಿದೆ. ಕೆನರಾ ಬ್ಯಾಂಕ್‍ನ ಮಾಜಿ ನಾನ್ ಎಕ್ಸಿಕ್ಯುಟಿವ್ ಚೇರ್ಮನ್ ಟಿ.ಎನ್ ಮನೋಹರನ್ ಅವರನ್ನು ಬ್ಯಾಂಕ್‍ನ ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ ಎಂದು ತಿಳಿದುಬಂದಿದೆ.
ಆರ್‍ಬಿಐ ಪ್ರಕಟಣೆಯಲ್ಲಿ ‘ಠೇವಣಿದಾರರ ಹಿತಾಸಕ್ತಿ ರಕ್ಷಿಸಲು, ಹಣಕಾಸು ಮತ್ತು ಬ್ಯಾಂಕಿಂಗ್ ವಲಯದ ಭದ್ರತೆಗಾಗಿ ಕೇಂದ್ರದಿಂದ ತಾತ್ಕಾಲಿಕ ನಿರ್ಬಂಧ ಹೇರುವ ಹೊರತು ಬೇರೆ ಮಾರ್ಗಗಳು ಕಂಡು ಬಂದಿಲ್ಲ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949ರ ಸೆಕ್ಷನ್ 45ರ ಅಡಿಯಲ್ಲಿ ನಿರ್ಬಂಧ ವಿಧಿಸಲಾಗಿದೆ’ ಎಂದು ತಿಳಿಸಿದೆ.