FILM
ಚೈತ್ರಾ ಕುಂದಾಪುರ ಜಾಮೀನು ರದ್ದತಿಗೆ ಕೋರ್ಟ್ ಮೆಟ್ಟಿಲೇರಿದ ಸಿಸಿಬಿ
ಬೆಂಗಳೂರು ಡಿಸೆಂಬರ್ 04: ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟಿ ಹಣ ವಂಚನೆ ಮಾಡಿದ ಪ್ರಕರಣದ ಪ್ರಮುಖ ಆರೋಪಿಯಾಗಿರು ಚೈತ್ರಾ ಕುಂದಾಪುರ ಅವರ ಜಾಮೀನು ರದ್ದುಗೊಳಿಸುವಂತೆ ರಾಜ್ಯ ಸರಕಾರ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮೆಟ್ಟಿಲೇರಿದೆ. ಈ ಸಂಬಂಧ ಚೈತ್ರಾಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.
ಜಾಮೀನು ರದ್ದತಿ ಸಂಬಂಧ ಕೇಂದ್ರೀಯ ಅಪರಾಧ ದಳ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಒಂದನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಸಿ ಡಿ ಪ್ರಕಾಶ್ ವಿಚಾರಣೆ ನಡೆಸಿದರು.
2023ರ ಡಿಸೆಂಬರ್ 5ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಚೈತ್ರಾ ಮತ್ತು ಇತರರಿಗೆ ಜಾಮೀನು ಮಂಜೂರು ಮಾಡಿತ್ತು. 2023ರ ನವೆಂಬರ್ 8ರಂದು ಹೈಕೋರ್ಟ್ ಪ್ರಕರಣದ ಮೂರನೇ ಆರೋಪಿ ಹಾಲಶ್ರೀಗೆ ಜಾಮೀನು ನೀಡಿತ್ತು. 2023ರ ನವೆಂಬರ್ 9ರಂದು ಸಿಸಿಬಿಯು ಆರೋಪ ಪಟ್ಟಿ ಸಲ್ಲಿಸಿತ್ತು.
ಈ ನಡುವೆ ಚೈತ್ರಾ ಕುಂದಾಪುರ ಅವರು ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ನ್ಯಾಯಾಲಯಕ್ಕೆ ಅಥವಾ ಪ್ರಾಸಿಕ್ಯೂಷನ್‌ಗೆ ತಿಳಿಸದೇ ಜಾಮೀನು ಷರತ್ತು ಉಲ್ಲಂಘಿಸಿರುವುದರಿಂದ ಅವರ ಜಾಮೀನು ರದ್ದುಪಡಿಸಬೇಕು ಎಂದು ರಾಜ್ಯ ಸರ್ಕಾರವು ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮೆಟ್ಟಿಲೇರಿದೆ. ಈ ಸಂಬಂಧ ಚೈತ್ರಾಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ. ಸಿಆರ್‌ಪಿಸಿ ಸೆಕ್ಷನ್ 317 ಅಡಿ ಅರ್ಜಿ ಸಲ್ಲಿಸುವ ಮೂಲಕ ಚೈತ್ರಾ ಅವರು ತಾನು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿರುವುದಾಗಿ ತಿಳಿಸಿದ್ದಾರೆ. ಆದರೆ ಈ ಅರ್ಜಿ ಸಲ್ಲಿಸುವವರೆಗೂ ಚೈತ್ರಾ ಅವರು ನ್ಯಾಯಾಲಯ ಅಥವಾ ಪ್ರಾಸಿಕ್ಯೂಷನ್‌ಗೆ ಹಿಂದಿನ ವಿಚಾರಣೆ ದಿನವಾದ 2024ರ ನವೆಂಬರ್ 8ರವರೆಗೆ ತಿಳಿಸಿರಲಿಲ್ಲ. ಈ ಮೂಲಕ ನ್ಯಾಯಾಲಯದ ಪ್ರಕ್ರಿಯೆ ವಿಳಂಬಗೊಳ್ಳುವುದಕ್ಕೆ ಚೈತ್ರಾ ಕಾರಣರಾಗಿದ್ದಾರೆ. ಈ ಮೂಲಕ ಅವರು ಜಾಮೀನು ಷರತ್ತು ಉಲ್ಲಂಘಿಸಿದ್ದಾರೆ. ಹೀಗಾಗಿ, ಅವರ ಜಾಮೀನು ರದ್ದುಪಡಿಸಬೇಕು ಎಂದು ಕೇಂದ್ರೀಯ ಅಪರಾಧ ದಳ (ಸಿಸಿಬಿ) ಕೋರಿದೆ.