LATEST NEWS
ಅಜೆಕಾರು – ಮೈಕ್ ಗೆ ಅನುಮತಿ ಇಲ್ಲ ಎಂದು ಯಕ್ಷಗಾನ ನಿಲ್ಲಿಸಲು ಮುಂದಾದ ಪೊಲೀಸರು – ಪೊಲೀಸರ ಕ್ರಮ ಸಮರ್ಥಿಸಿದ ಎಸ್ಪಿ
ಉಡುಪಿ ಜನವರಿ 15: ಕರಾವಳಿಯಲ್ಲಿ ಇದೀಗ ಯಕ್ಷಗಾನವನ್ನು ಪೊಲೀಸರು ಅರ್ಧದಲ್ಲಿ ನಿಲ್ಲಿಸುತ್ತಿದ್ದಾರೆ. ಮೈಕ್ ಗೆ ಅನುಮತಿ ಪಡೆದಿಲ್ಲ ಎಂಬ ಕಾರಣವೊಡ್ಡಿ ಯಕ್ಷಗಾನ ಪ್ರದರ್ಶನಕ್ಕೆ ತಡೆಯೊಡ್ಡಿದ ಪ್ರಕರಣ ನಡೆದಿದೆ. ಪೊಲೀಸರು ಕ್ರಮವನ್ನು ಜಿಲ್ಲಾ ಎಸ್ಪಿ ಸಮರ್ಥಿಸಿಕೊಂಡಿದ್ದು, ಸುಪ್ರೀಂಕೋರ್ಟ್ ಆದೇಶದಂತೆ ಕಾನೂನು ಪಾಲಿಸಿದ್ದೇವೆ ಎಂದಿದ್ದಾರೆ.
ಕಾರ್ಕಳ ತಾಲೂಕಿನ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿ ಶಿರ್ಲಾಲುವಿನಲ್ಲಿ ಘಟನೆ ನಡೆದಿದೆ. ಮುಂಡ್ಲಿಯ ಈಶ್ವರ ಯಕ್ಷಗಾನ ಮಂಡಳಿಯಿಂದ ಆಯೋಜನೆಗೊಂಡಿದ್ದ ಯಕ್ಷಗಾನ ಪ್ರದರ್ಶನದಲ್ಲಿ ಪೊಲೀಸರು 10 ಗಂಟೆ ನಂತರ ಧ್ವನಿವರ್ದಕ ಬಳಸಿದ್ದಕ್ಕೆ ಅಜೆಕಾರು ಉಪನಿರೀಕ್ಷಕ ಶುಭಕರ್ ಅವರಿಂದ ರಾತ್ರಿ 10ರ ನಂತರ ಯಕ್ಷಗಾನ ಪ್ರದರ್ಶನಕ್ಕೆ ಆಕ್ಷೇಪ ವ್ಯಕ್ತವಾಗಿದೆ. 10 ಗಂಟೆ ನಂತರ ಧ್ವನಿವರ್ಧಕ ಬಳಸಿದ್ದಕ್ಕೆ ಯಕ್ಷಗಾನ ಪ್ರದರ್ಶನಕ್ಕೆ ತಡೆಯೊಡ್ಡಲಾಗಿದೆ. ಅಲ್ಲದೆ, ಆಯೋಜಕರನ್ನು ಅರೆಸ್ಟ್ ಮಾಡಲು ಕೂಡ ಪೊಲೀಸರು ಮುಂದಾಗಿದ್ದಾರೆ.
ಈ ವೇಳೆ ಸಿಟ್ಟಾದ ಗ್ರಾಮಸ್ಥರು, ಇಡೀ ಗ್ರಾಮದ ಜನರನ್ನು ಅರೆಸ್ಟ್ ಮಾಡಿ ಎಂದು ಹೈಡ್ರಾಮಾ ನಡೆಸಿದ್ದಾರೆ. ಕಾರ್ಯಕ್ರಮ ನಿಲ್ಲಿಸದಿದ್ದರೆ ಯಕ್ಷಗಾನ ಮಂಡಳಿ ಅಧ್ಯಕ್ಷನನ್ನು ಬಂಧಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಗ್ರಾಮಸ್ಥರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಜನವರಿ 10 ರಂದು ಪರವಾನಿಗೆಗೆ ಪಿಡಿಒ ಬಳಿ ಆಯೋಜಕರು ತೆರಳಿದ್ದರು. ಮೂರು ದಿನಗಳ ರಜೆಯ ಕಾರಣಕ್ಕೆ ಅನುಮತಿ ದೊರಕಿರಲಿಲ್ಲ. ಜನವರಿ 13ರಂದು ಅನುಮತಿಗಾಗಿ ಆಯೋಜಕರು ಅಜೆಕಾರು ಠಾಣೆಗೆ ಹೋಗಿದ್ದರು. ಈ ವೇಳೆ, ಪಂಚಾಯತ್ ಅನುಮತಿ ತರುವಂತೆ ಪೊಲೀಸರ ತಾಕಿತು ಮಾಡಿದ್ದಾರೆ. ಸಂಬಧಪಟ್ಟಂತೆ ಯಕ್ಷಗಾನ ಮಂಡಳಿ ಅಧ್ಯಕ್ಷ ಸದಾನಂದ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ. ಮಹಾಲಕ್ಷ್ಮಿ ಸೌಂಡ್ಸ್ ನ ಮುಖ್ಯಸ್ಥ ಅಪ್ಪು ವಿರುದ್ಧವೂ ಕೇಸ್ ಹಾಕಲಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಎಸ್ಪಿ ನಿನ್ನೆ ರಾತ್ರಿ ಅಜೆಕಾರ್ ಪೊಲೀಸರಿಗೆ ಯಾವುದೇ ಅನುಮತಿಯಿಲ್ಲದೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ರಾತ್ರಿ ವೇಳೆ ಧ್ವನಿವರ್ಧಕ ಬಳಸುವುದರಿಂದ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರಿಂದ ಕರೆ ಬಂದಿದೆ. ಪೊಲೀಸರು ಹೋಗಿ ವಿಚಾರಿಸಿದಾಗ ಕಾರ್ಯಕ್ರಮ ಆಯೋಜಿಸಲು ಅನುಮತಿ ಪಡೆದಿರುವುದಿಲ್ಲ. ಧ್ವನಿವರ್ಧಕ ಬಳಸಲು ಕೂಡ ಅನುಮತಿ ಪಡೆಯದೆ ಇರುವುದು ಕಂಡುಬಂದಿದೆ. ರಾತ್ರಿ 11.30 ಗಂಟೆಗೆ ಪೊಲೀಸರು ಧ್ವನಿವರ್ಧಕವನ್ನು ಬಳಸದಂತೆ ತಿಳಿಸಿದರೂ ಕೂಡ, ಅದನ್ನು ನಿರಾಕರಿಸಿ ಬೆಳಿಗ್ಗೆ 4.30 ಗಂಟೆಯವರೆಗೆ ಮುಂದುವರಿಸುತ್ತಾರೆ. ಹೀಗಾಗಿ ಯಾವುದೇ ಅನುಮತಿ ಪಡೆಯದೆ ರಾತ್ರಿ ವೇಳೆ ಧ್ವನಿವರ್ಧಕ ಬಳಸಿ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಆಯೋಜಕರ ಮೇಲೆ ಅಜೆಕಾರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 02/25 ಕಲಂ. 292 BNS ಮತ್ತು 37 KP Act. ರಂತೆ ಪ್ರಕರಣ ದಾಖಲಿಸಲಾಗಿದೆ.
ಸಾರ್ವಜನಿಕ ಸ್ಥಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಮತ್ತು ಧ್ವನಿವರ್ಧಕ ಬಳಸಲು ಅನುಮತಿಯ ಅಗತ್ಯವಿದೆ ಎಂದು ಈ ಮೂಲಕ ಸ್ಪಷ್ಟಪಡಿಸಲಾಗಿದೆ. ಮತ್ತು ಈ ಬಗ್ಗೆ ಸಾರ್ವಜನಿಕರಿಂದ ಯಾವುದೇ ದೂರುಗಳು ಬಂದಲ್ಲಿ, ಅದನ್ನು ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳಿಗೆ ಅನುಗುಣವಾಗಿ ಪರಿಶೀಲಸಿ ಕ್ರಮ ಕೈಗೊಳ್ಳಲು ಪೊಲೀಸರು ಬದ್ಧರಾಗಿರುತ್ತಾರೆ.