BANTWAL
ವಿಧಾನಸಭೆ ಚುನಾವಣೆ ಸಂದರ್ಭ ಅಕ್ರಮ ಹಣ ಸಂಗ್ರಹ ರಮಾನಾಥ ರೈ ವಿರುದ್ದ ಎಫ್ಐಆರ್ ದಾಖಲು
ವಿಧಾನಸಭೆ ಚುನಾವಣೆ ಸಂದರ್ಭ ಅಕ್ರಮ ಹಣ ಸಂಗ್ರಹ ರಮಾನಾಥ ರೈ ವಿರುದ್ದ ಎಫ್ಐಆರ್ ದಾಖಲು
ಮಂಗಳೂರು ಮಾರ್ಚ್ 6: ವಿಧಾನ ಸಭಾ ಚುನಾವಣೆ ವೇಳೆ ಮತದಾರರಿಗೆ ಹಣ ಹಂಚಲು 62 ಲಕ್ಷ ನಗದು ಸಂಗ್ರಹಿಸಿಟ್ಟುಕೊಂಡಿದ್ದ ಆರೋಪದ ಮೇಲೆ ಮಾಜಿ ಸಚಿವ ರಮಾನಾಥ ರೈ ಸೇರಿದಂತೆ 6 ಮಂದಿ ವಿರುದ್ದ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ.
2018ನೇ ಸಾಲಿನ ವಿಧಾನ ಸಭಾ ಚುನಾವಣೆಗೆ ಮುಂಚಿತವಾಗಿ ಖಚಿತ ಮಾಹಿತಿ ಮೇರೆಗೆ ಆದಾಯ ತೆರಿಗೆ ಆಧಿಕಾರಿಗಳು ಸುಧಾಕರ ಶೆಟ್ಟಿ ಅವರ ಕಚೇರಿ ಮೇಲೆ ದಾಳಿ ನಡೆಸಿ 22 ಲಕ್ಷ ರೂ, ಬಿ.ಸಿ ರೋಡ್ನ ಶ್ರೀನಿವಾಸ್ ಲಾಡ್ಜ್ ಮೇಲೆ ದಾಳಿ ಮಾಡಿ ಡೆನ್ಸಿಲ್ ಹರ್ಮನ್ ಎಂಬವರಿಂದ 40 ಲಕ್ಷ ರೂ ವಶಪಡಿಸಿಕೊಂಡಿದ್ದು, ಒಟ್ಟು ರೂ. 62 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿತ್ತು.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೀಡಿರುವ ವರದಿ ಆಧರಿಸಿ ಬಂಟ್ವಾಳ ತಹಶೀಲ್ದಾರ್ ಸಣ್ಣರಂಗಯ್ಯ ಪೊಲೀಸ್ ಠಾಣೆಗ ದೂರು ನೀಡಿದ್ದರು. ನ್ಯಾಯಾಲಯದ ಅನುಮತಿ ಪಡೆದು ಭಾರತೀಯ ದಂಡ ಸಂಹಿತೆ ಮತ್ತು ಪ್ರಜಾ ಪ್ರತಿನಿಧಿ ಕಾಯ್ದೆ–1951ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಗುತ್ತಿಗೆದಾರರಾದ ಬೆಂಗಳೂರಿನ ನಿರ್ಮಾಣ್ ಕನ್‌ಸ್ಟ್ರಕ್ಷನ್ಸ್‌ನ ಉದಯ ಹೆಗ್ಡೆ, ಮಂಗಳೂರಿನ ಪದವಿನಂಗಡಿಯ ಮುಗರೋಡಿ ಕನ್‌ಸ್ಟ್ರಕ್ಷನ್ಸ್‌ನ ಸುಧಾಕರ ಶೆಟ್ಟಿ, ಮುಗರೋಡಿ ಕನ್‌ಸ್ಟ್ರಕ್ಷನ್ಸ್‌ನ ಅಕೌಂಟೆಂಟ್ ವರುಣ, ನೌಕರ ಪ್ರೀತೇಶ್, ರಮಾನಾಥ ರೈ ಅವರ ಆಪ್ತ ಸಹಾಯಕರಾಗಿದ್ದ ಡೆಂಝಿಲ್ ಹರ್ಮನ್ ಮತ್ತು ರಮಾನಾಥ ರೈ ಅವರನ್ನು ಆರೋಪಿಗಳು ಎಂದು ಹೆಸರಿಸಲಾಗಿದೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಎಲ್ಲರ ವಿಚಾರಣೆ ನಡೆಸಿ. ಬಂಟ್ವಾಳ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸಾರ್ವಜನಿಕರಿಗೆ ಹಂಚಲು ಹಣ ಸಂಗ್ರಹಿಸಿಟ್ಟುಕೊಂಡಿದ್ದರು. ಈ ಎಲ್ಲರೂ ಚುನಾವಣಾ ಅಕ್ರಮ ನಡೆಸಿರುತ್ತಾರೆ ಎಂದು ಆದಾಯ ತೆರಿಗೆ ಅಧಿಕಾರಿಗಳು ಜಿಲ್ಲಾ ಚುನಾವಣಾಧಿಕಾರಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸಿದ್ದರು. ಅದರೊಂದಿಗೆ ವಶಕ್ಕೆ ಪಡೆದಿದ್ದ ನಗದು ಮತ್ತು ದಾಖಲೆಗಳನ್ನು ಹಸ್ತಾಂತರಿಸಿದ್ದರು.