LATEST NEWS
ಪಾದರಕ್ಷೆಯ ಜಾಹೀರಾತಿಗಾಗಿ ಹಿಂದೂ ದೇವತೆ ರೀತಿ ಫೋಟೋಶೂಟ್: ಕ್ಷಮೆ ಕೇಳಿದ ಗಾಯಕಿ!

ನವದೆಹಲಿ, ನವೆಂಬರ್ 13: ಅಂತಾರಾಷ್ಟ್ರೀಯ ಖ್ಯಾತಿಯ ರಾಪರ್ ಕಾರ್ಡಿ ಬಿ ಇತ್ತೀಚೆಗೆ ಮಾಡಿಸಿಕೊಂಡಿದ್ದ ಫೋಟೋ ಶೂಟ್ ವಿವಾದಕ್ಕೆ ಕಾರಣವಾಗಿತ್ತು. ಈಗ ಅವರು ಅದಕ್ಕೆ ಸಂಬಂಧಿಸಿ ಕ್ಷಮೆ ಕೋರಿದ್ದಾರೆ.ಪಾದರಕ್ಷೆಯ ಜಾಹೀರಾತಿಗಾಗಿ ಹಿಂದೂ ದೇವತೆ ದುರ್ಗೆಯ ರೀತಿ ಅವರು ಫೋಟೋಶೂಟ್ ಮಾಡಿಸಿಕೊಂಡಿದ್ದರು. ಇದರಿಂದ ಇಂಟರ್‌ನೆಟ್‌ನಲ್ಲಿ ಕಾರ್ಡಿಯನ್ನು ಜನ ಆಕ್ರೋಶಗೊಂಡು ತರಾಟೆಗೆ ತೆಗೆದುಕೊಂಡಿದ್ದರು. ಈ ಪೋಸ್ಟ್ ವೈರಲ್ ಆಗಿತ್ತು. ಇದನ್ನು ಕಂಡ ಕಾರ್ಡಿ ಬಿ ತನ್ನ ಇನ್‌ಸ್ಟಾಗ್ರಾಮ್ ಮೂಲಕ ಕ್ಷಮೆ ಕೇಳಿದ್ದಾರೆ.
‘ನಾನು ಯಾರ ಭಾವನೆಯನ್ನೂ ನೋಯಿಸುವ ಉದ್ದೇಶದಿಂದ ಈ ಫೋಟೋಶೂಟ್ ಮಾಡಿಸಿಕೊಂಡಿರಲಿಲ್ಲ. ಆಗಿ ಹೋಗಿರುವುದನ್ನು ಬದಲಾಯಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಎಚ್ಚರದಿಂದ ಇರುತ್ತೇನೆ’ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

‘ನಾನು ಚಿತ್ರೀಕರಣ ಮಾಡಿದಾಗ, ನೀವು ಶಕ್ತಿ, ಸ್ತ್ರೀತ್ವ, ವಿಮೋಚನೆಯನ್ನು ಪ್ರತಿನಿಧಿಸಲಿದ್ದೀರಿ ಎಂದು ಇದರ ನಿರ್ದೇಶಕರು ಹೇಳಿದ್ದರು. ಆದರೆ ಈಗ ಅದು ವಿವಾದವಾಗಿದೆ ಮತ್ತು ಒಂದು ಧರ್ಮವನ್ನು ಅವಹೇಳನ ಮಾಡಿದೆ ಎಂದು ಜನ ಹೇಳುತ್ತಿದ್ದಾರೆ. ನನ್ನ ಉದ್ದೇಶ ಅದಾಗಿರಲಿಲ್ಲ. ಯಾರ ಧರ್ಮವನ್ನೂ ಹೀಗಳೆಯುವುದು ನನಗೆ ಇಷ್ಟವಿಲ್ಲ. ನನ್ನ ಧರ್ಮವನ್ನು ಬೇರೆ ಯಾರಾದರೂ ಹೀಂಗಳೆದರೆ ಅದು ನನಗೆ ಇಷ್ಟವಾಗುವುದಿಲ್ಲ’ ಎಂದು ಅವರು ಹೇಳಿದ್ದಾರೆ.