Connect with us

LATEST NEWS

ಸುಪ್ರೀಂಕೋರ್ಟ್ ವಿರುದ್ದ ತೊಡೆತಟ್ಟಿದ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ…ವಿವಾದಾತ್ಮಕ ಟ್ವೀಟ್ ಡಿಲೀಟ್ ಮಾಡಲು ನಕಾರ

ನವದೆಹಲಿ ನವೆಂಬರ್ 13: ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದ್ದನ್ನು ವಿರೋಧಿಸಿ ಸುಪ್ರೀಂ ಕೋರ್ಟ್ ಕಾರ್ಯಾಚರಣೆ ಹಾಗೂ ಮುಖ್ಯ ನ್ಯಾಯಮೂರ್ತಿಗಳ ವಿರುದ್ದ ವಿವಾದಾತ್ಮಕ ಟ್ವೀಟ್‌ ಮಾಡಿದ್ದ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ತಾನು ಮಾಡಿರುವ ಟ್ವೀಟ್ ಗಳನ್ನು ಡಿಲೀಟ್ ಮಾಡುವುದಿಲ್ಲ ಮತ್ತು ಈ ಸಂಬಂಧ ಯಾರ ಕ್ಷಮೆಯನ್ನೂ ಯಾಚಿಸುವುದಿಲ್ಲ, ದಂಡವನ್ನೂ ಪಾವತಿಸುವುದಿಲ್ಲ ಎಂದು ಹೇಳುವ ಮೂಲಕ ದೇಶದ ಸರ್ವೋಚ್ಚ ನ್ಯಾಯಾಲಯಕ್ಕೆ ಸಡ್ಡು ಹೊಡೆದಿದ್ದಾರೆ.


ಕುನಾಲ್ ಕಾಮ್ರಾ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಒಪ್ಪಿಗೆ ನೀಡಿದ ಮಾರನೆ ದಿನ ಕಾಮಿಡಿಯನ್ ಈ ಪ್ರತಿಕ್ರಿಯೆ ನೀಡಿದ್ದಾರೆ.


‘ನನಗೆ ನನ್ನ ಟ್ವೀಟ್‌ಗಳನ್ನು ಹಿಂಪಡೆಯುವ ಉದ್ದೇಶವಿಲ್ಲ. ಅವು ತಮ್ಮಷ್ಟಕ್ಕೆ ಏನು ಹೇಳಬೇಕೋ ಅದನ್ನು ಹೇಳುತ್ತವೆ. ವಕೀಲರು ಇಲ್ಲ, ಕ್ಷಮಾಪಣೆ ಇಲ್ಲ, ದಂಡ ಕಟ್ಟಲ್ಲ, ಜಾಗ ಹಾಳು ಮಾಡಲ್ಲ’ ಎಂದು ಕಾಮ್ರಾ ಟ್ವೀಟ್‌ ಮೂಲಕ ಸ್ಪಷ್ಟಪಡಿಸಿದ್ದಾರೆ.
ರಿಪಬ್ಲಿಕ್ ಟಿವಿ ಸಂಪಾದಕ ಆರ್ನಬ್ ಗೋಸ್ವಾಮಿ ಜಾಮೀನು ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶವನ್ನು ಟೀಕಿಸಿ ಕಾಮ್ರಾ ಟ್ವೀಟ್‌ ಮಾಡಿದ್ದರು. ‘ತಮಾಷೆಯ ಗೆರೆಯನ್ನು ಕಾಮ್ರಾ ದಾಟಿದ್ದಾರೆ’ ಎಂದು ಹೇಳಿದ್ದ ಅಟಾರ್ನಿ ಜನರಲ್ ವೇಣುಗೋಪಾಲ್, ಕಾಮ್ರಾ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅವಕಾಶ ನೀಡಿದ್ದರು.

Facebook Comments

comments