Connect with us

LATEST NEWS

ಕಾಂಗ್ರೆಸ್ ನ ಆ್ಯಂಟಿ ಕಮ್ಯೂನಲ್ ಟಾಸ್ಕ್ ಫೋರ್ಸ್ ಗೆ ಸೋನಿಯಾ ಗಾಂಧಿಯವರ ವಿವಾದಾತ್ಮಕ ಕೋಮು ಹಿಂಸಾಚಾರ ಮಸೂದೆ ಪ್ರೇರಣೆ – ಸಂಸದ ಕ್ಯಾ. ಚೌಟ ಆಕ್ಷೇಪ

ಮಂಗಳೂರು ಮೇ 03: ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧ ಮಂಗಳೂರಿಗೆ ಭೇಟಿ ನೀಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸ್ಥಳೀಯ ಜನಪ್ರತಿನಿಧಿಗಳ ಜತೆಗೆ ಯಾವುದೇ ಚರ್ಚೆ ನಡೆಸದೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡು ಆ್ಯಂಟಿ ಕಮ್ಯೂನಲ್ ಟಾಸ್ಕ್‌ಫೋರ್ಸ್ ರಚನೆ ಸ್ಥಾಪನೆಯ ಘೋಷಣೆ ಮಾಡಿರುವುದನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಕುಟುವಾಗಿ ಟೀಕಿಸಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಹಿನ್ನಲೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಆದರೆ, ಇಂಥಹ ಸೂಕ್ಷ್ಮ ವಿಚಾರದ ಬಗ್ಗೆ ಗೃಹ ಸಚಿವರು ಇಲ್ಲಿನ ಯಾವುದೇ ಜನಪ್ರತಿನಿಧಿಗಳೊಂದಿಗೆ ಚರ್ಚಿಸುವುದಾಗಲಿ ಅಥವಾ ಪರಿಸ್ಥಿತಿ ಬಗ್ಗೆ ಅವರ ಅಭಿಪ್ರಾಯವನ್ನು ಪಡೆಯುವ ಪ್ರಯತ್ನವನ್ನಾಗಲಿ ಮಾಡಿಲ್ಲ. ಪೊಲೀಸರ ಜತೆ ಕಾನೂನು ಸುವ್ಯವಸ್ಥೆ ಸಭೆ ನಡೆಸಿರುವ ಗೃಹ ಸಚಿವರು ಅದಕ್ಕೂ ಮುನ್ನ ಮುಸ್ಲಿಂ ಮುಖಂಡರೊಂದಿಗೆ ಸಭೆ ನಡೆಸಲು ಉತ್ಸಾಹ ತೋರಿದ್ದಾರೆ. ಈ ವಿಚಾರದಲ್ಲಿ ಸಚಿವರು ಜನಪ್ರತಿನಿಧಿಗಳನ್ನು ಕಡೆಗಣಿಸಿ ಏಕಪಕ್ಷೀಯ ತೀರ್ಮಾನ ಕೈಗೊಂಡಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ. ಆ ಮೂಲಕ, ಗೃಹ ಸಚಿವರು ಈ ಪ್ರದೇಶದ ಸಂವೇದನಾಶೀಲತೆಯನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇದು, ಸ್ಥಳೀಯ ಜನರ ಭಾವನೆಗಳನ್ನು ಮತ್ತು ವಾಸ್ತವಿಕ ಪರಿಸ್ಥಿತಿಯನ್ನು ಕಡೆಗಣಿಸಿದಂತೆಯೇ ಸರಿ ಎಂದು ಕ್ಯಾ. ಚೌಟ ಆರೋಪಿಸಿದ್ದಾರೆ.

ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಮೊದಲು ವೈಯಕ್ತಿಕ ದ್ವೇಷ ಮತ್ತು ಗ್ಯಾಂಗ್ ವಾರ್ ಎಂದು ಬಿಂಬಿಸಿದ್ದ ಕಾಂಗ್ರೆಸ್ ಸರ್ಕಾರ, ಪ್ರಕರಣದ ಸತ್ಯಾಂಶ ಹೊರಬಂದ ಬಳಿಕ ಅದಕ್ಕೆ ಕೋಮು ಬಣ್ಣ ಕಟ್ಟುವ ಪ್ರಯತ್ನ ಮಾಡುತ್ತಿದೆ. ಈಗ ಅವರ ನಿಲುವು ಹೇಗೆ ಬದಲಾಗಿದ್ದು? ಈಗಲಾದರೂ ಈ ಕಾಂಗ್ರೆಸ್ ಸರ್ಕಾರವು ಸುಹಾಸ್ ಹಿಂದೂ ಆಗಿರುವುದಕ್ಕೆ ಹತ್ಯೆಯಾಗಿದೆ ಎಂದು ಬಹಿರಂಗವಾಗಿ ಹೇಳುವ ಧೈರ್ಯ ತೋರುತ್ತದೆಯೇ? ಇಂಥಹ ಗಂಭೀರ ಹಾಗೂ ಸೂಕ್ಷ್ಮ ಪ್ರಕರಣಗಳಲ್ಲಿಯೂ ಕೇವಲ ಒಂದು ಸಮುದಾಯವನ್ನಷ್ಟೇ ಓಲೈಸುವ ಈ ಸಿದ್ದರಾಮಯ್ಯ ಸರ್ಕಾರದ ನಿಜವಾದ ಅಜೆಂಡಾ ಏನು? ಎಂದು ಕ್ಯಾ. ಚೌಟ ಪ್ರಶ್ನಿಸಿದ್ದಾರೆ.

ಅತ್ಯಂತ ನೋವಿನ ಸಂಗತಿ ಅಂದರೆ ಪ್ರವೀಣ್ ನೆಟ್ಟಾರ್, ದೀಪಕ್ ರಾವ್ ಹಾಗೂ ಅದಕ್ಕೂ ಹಿಂದಿನ ನಮ್ಮ ಅನೇಕ ಕಾರ್ಯಕರ್ತರಂತೆ ಸುಹಾಸ್ ಶೆಟ್ಟಿಯೂ ಅಪ್ಪಟ ಹಿಂದೂ ರಾಷ್ಟ್ರವಾದಿ ಆಗಿದ್ದಕ್ಕಾಗಿ ಇಸ್ಲಾಮಿಕ್ ಮೂಲಭೂತವಾದಿ ಮನಸ್ಥಿತಿಗಳಿಂದ ಕೊಲೆಯಾಗಿದ್ದಾರೆ. ಈ ಕಾಂಗ್ರೆಸ್ ಸರ್ಕಾರವು ಕರಾವಳಿಯನ್ನು ಕೋಮು ಗಲಭೆ ಪೀಡಿತ ಎಂದು ಹಣೆಪಟ್ಟಿ ಕಟ್ಟಿ ನೈಜ ಪರಿಸ್ಥಿತಿಯನ್ನು ಎದುರಿಸುವ ಬದಲು, ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದೆ. ಈ ಘಟನೆ ಕೋಮು ಹಿಂಸಾಚಾರವಲ್ಲ, ಧಾರ್ಮಿಕ ವೈಷಮ್ಯವೂ ಅಲ್ಲ. ಇದು ರಾಷ್ಟ್ರೀಯತೆ ಮತ್ತು ಇಸ್ಲಾಮಿಕ್ ಮೂಲಭೂತವಾದದ ನಡುವಿನ ಹೋರಾಟ. ಕಾಂಗ್ರೆಸ್ ನ ವೋಟ್ ಬ್ಯಾಂಕ್ ರಾಜಕಾರಣ ಮತ್ತು ನಕಲಿ ಜಾತ್ಯತೀತ ನೀತಿಗಳಿಂದಾಗಿ ಇಸ್ಲಾಮಿಕ್ ಮೂಲಭೂತವಾದಕ್ಕೆ ಪ್ರಚೋದನೆ ಸಿಕ್ಕಿರುವುದರ ಪರಿಣಾಮ ಹಿಂದೂ ಕಾರ್ಯಕರ್ತರ ಹತ್ಯೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಗೃಹ ಸಚಿವ ಪರಮೇಶ್ವರ್ ಅವರು ಘೋಷಿಸಿದ ‘ಕೋಮು ವಿರೋಧಿ ಕಾರ್ಯಪಡೆ’ಯು ಕಾಂಗ್ರೆಸ್ನ ಹಿರಿಯ ನಾಯಕಿ ಸೋನಿಯಾ ಗಾಂಧಿಯವರು ಪ್ರಸ್ತಾಪಿಸಿದ್ದ ವಿವಾದಾತ್ಮಕ ಕೋಮು ಹಿಂಸಾಚಾರ ಕರಡು ಮಸೂದೆಯಿಂದ ಪ್ರೇರಣೆ ಪಡೆದಂತಿದೆ. ಆ ಮಸೂದೆಯು ಕೋಮು ಸೌಹಾರ್ದತೆಯ ಹೆಸರಿನಲ್ಲಿ ಮುಸ್ಲಿಮರನ್ನು ಓಲೈಸಿ ಹಿಂದೂ ಸಮುದಾಯದ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ನಡೆಸಿತ್ತು. ಕೋಮು ಹಿಂಸಾಚಾರವನ್ನು ತಡೆಗಟ್ಟುವ’ ನೆಪದಲ್ಲಿ ಹಿಂದೂಗಳು, ಹಿಂದೂ ಸಂಘಟನೆಗಳು ಹಾಗೂ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಎಲ್ಲವನ್ನೂ ಗುರಿಯಾಗಿಸುವ ಉದ್ದೇಶ ಹೊಂದಿತ್ತು. ಅದೇ ರೀತಿ ಆ್ಯಂಟಿ ಕಮ್ಯೂನಲ್ ಟಾಸ್ಕ್‌ಫೋರ್ಸ್ ರಚನೆ ಉದ್ದೇಶ ಕೂಡ ಓಲೈಕೆ ರಾಜಕಾರಣದ ಮುಂದುವರಿದ ಭಾಗವಾದಂತಿದೆ. ಈ ಹಿಂದೆ ಹಿಂದೂಗಳನ್ನು ಮೂರ್ಖರನ್ನಾಗಿಸಿ ಅವರ ಹಕ್ಕುಗಳನ್ನು ತುಳಿದು ಓಲೈಕೆಯ ನೀತಿ ನಿರ್ಧಾರಗಳನ್ನು ಜನರ ಮೇಲೆ ಹೇರಲಾಗುತ್ತಿತ್ತು. ಆದರೆ ಈಗ ಇರುವುದು ಕಾಂಗ್ರೆಸ್ ಯುಗದ ಭಾರತವಲ್ಲ ಎಂಬುದನ್ನು ಮುಸ್ಲಿಮರನ್ನು ಓಲೈಸುವ ಈ ನಾಯಕರು ಮರೆಯಬಾರದು ಎಂದು ಎಚ್ಚರಿಸಿದ್ದಾರೆ.

ಸುಹಾಸ್ ಹತ್ಯೆ ಪ್ರಕರಣ ರಾಷ್ಟ್ರೀಯತೆ ಮತ್ತು ಇಸ್ಲಾಮಿಕ್ ಮೂಲಭೂತವಾದದ ನಡುವಿನ ಹೋರಾಟ ಎಂದು ನೇರವಾಗಿ ಹೇಳುವ ಸಮಯ ಬಂದಿದೆ. ನಮ್ಮ ದೇಶದ ಗಡಿಯೊಳಗೆ ಮತ್ತು ಹೊರಗೆ ಇರುವ ಇಸ್ಲಾಮಿಕ್ ಮೂಲಭೂತವಾದವೇ ಭಾರತವನ್ನು ವ್ಯಾಪಿಸುತ್ತಿದ್ದು, ನಾವು ಮೌನವಾಗಿರುವುದರ ಬದಲು ಒಂದು ನಿದರ್ಶನವನ್ನು ಸ್ಥಾಪಿಸುವ ರೀತಿಯಲ್ಲಿ ಅದಕ್ಕೆ ತಕ್ಕ ರೀತಿಯಲ್ಲಿ ಪ್ರತಿಕ್ರಿಯಿಸುವ ಸಂದರ್ಭವಿದು ಎಂದು ಕ್ಯಾ. ಚೌಟ ಹೇಳಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *